ನ್ಯೂಸ್

ನಾನೂ ನಿಮ್ಮಂತೆ... ದಯವಿಟ್ಟು ಇದನ್ನೆಲ್ಲ ನನ್ನ ಮುಂದೆ ಮಾಡಬೇಡಿ: ಸಾಯಿ ಪಲ್ಲವಿ | Sai Pallavi

Sai Pallavi: ತನ್ನ ನ್ಯಾಚುರಲ್ ಬ್ಯೂಟಿಯಿಂದಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಖ್ಯಾತಿ ಪಡೆದಿರುವ ನಟಿ ಸಾಯಿ ಪಲ್ಲವಿ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ತಮ್ಮದೇಯಾದ ಹೆಸರು ಗಳಿಸಿದ್ದಾರೆ. ಗ್ಲಾಮರಸ್​ ಪಾತ್ರಗಳಿಂದ ದೂರವಾಗಿ, ಸಹಜ ನಟಿಯಾಗಿ ಛಾಪು ಮೂಡಿಸಿರುವ ಈ ಸರಳ ಸುಂದರಿ, ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ನಾಯಕಿಯಾಗಿ ಚಿತ್ರಪ್ರೇಮಿಗಳಿಗೆ ಪರಿಚಯವಾದರು. ಸ್ಟಾರ್​ ನಟರೊಂದಿಗೆ ಅಭಿನಯಿಸಿರುವ ಸೌತ್ ಬ್ಯೂಟಿ, ತಾವು ನಟಿಸಿದ ಬಹುತೇಕ ಚಿತ್ರಗಳಲ್ಲಿ ಯಶಸ್ಸು ನೋಡಿದ್ದಾರೆ. ಇದೇ ಇಂದು ನಟಿಯ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸರಳ ಅಭಿನಯಕ್ಕೆ ಫಿದಾ

ಟಾಲಿವುಡ್​ ಮತ್ತು ಕಾಲಿವುಡ್​ ಚಿತ್ರಗಳಲ್ಲಿ ಅಭಿನಯಿಸಿರುವ ಸಾಯಿ ಪಲ್ಲವಿ, ನಟಿಸಿದ ಶೇ.90ರಷ್ಟು ಸಿನಿಮಾಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಸಾಯಿ ಪಲ್ಲವಿ ಅವರ ಸರಳ ಅಭಿನಯಕ್ಕೆ ಫಿದಾ ಆಗಿರುವ ಚಿತ್ರಪ್ರೇಮಿಗಳು, ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾಗಳ ರಿಲೀಸ್​ಗಾಗಿ ಕಾಯತೊಡಗಿದ್ದಾರೆ. ಇತ್ತೀಚೆಗಷ್ಟೇ ತಮಿಳು ನಟ ಶಿವಕಾರ್ತಿಕೆಯನ್​ ಅವರೊಂದಿಗೆ 'ಅಮರಾನ್' ಸಿನಿಮಾದಲ್ಲಿ ಕಾಣಿಸಿಕೊಂಡ ಸಾಯಿ ಪಲ್ಲವಿ, ಚಿತ್ರರಸಿಕರಿಂದ ಅಪಾರ ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಿಟ್ಟಿಸಿಕೊಂಡರು. ಇದೀಗ ಬಾಲಿವುಡ್​ಗೆ ಎಂಟ್ರಿಕೊಟ್ಟಿರುವ ಸೌತ್ ಬ್ಯೂಟಿ, ರಣಬೀರ್​ ಕಪೂರ್​ ನಟಿಸುತ್ತಿರುವ 'ರಾಮಾಯಣಂ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನನ್ನ ಫೋಟೋ

ತಾನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಕಥೆಗೂ ಹೆಚ್ಚು ಆದ್ಯತೆ ನೀಡುವ ಸಾಯಿ ಪಲ್ಲವಿ, ತಮ್ಮ ಮೊದಲ ಗೆಲುವನ್ನು ಸ್ಕ್ರಿಪ್ಟ್​ ಆಯ್ಕೆಯಲ್ಲಿಯೇ ನೋಡುವುದು ಗಮನಾರ್ಹ. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳ ಗೆಲುವಿನಲ್ಲಿರುವ ಸಾಯಿ ಪಲ್ಲವಿ, "ಪ್ರತಿಯೊಬ್ಬರಿಗೂ ಅವರದ್ದೇ ಆದ ಭಯ, ಮುಜುಗರ ಸ್ವಭಾವ ಇರುತ್ತದೆ. ನಾನು ಎಲ್ಲಾದರೂ ಹೊರೆಗೆ ಹೋಗುವಾಗ ಯಾರಾದರೊಬ್ಬರು ನನ್ನ ಫೋಟೋವನ್ನು ಕ್ಲಿಕ್ಕಿಸುತ್ತಾರೆ. ಇದು ನನಗೆ ಇಷ್ಟವಿಲ್ಲ. ಕೆಲವರು ಇದ್ದಕ್ಕಿದ್ದಂತೆ ತಮ್ಮ ಸ್ಮಾರ್ಟ್​​ಫೋನ್​ಗಳಲ್ಲಿ ನನ್ನ ಫೋಟೋ ತೆಗೆಯುತ್ತಿರುತ್ತಾರೆ. ಅದು ನಿಜಕ್ಕೂ ನನಗೆ ಇರಿಸು-ಮುರಿಸಾಗುತ್ತದೆ" ಎಂದಿದ್ದಾರೆ.

"ನಾನೇನು ಒಂದು ಮರ ಅಥವಾ ಸುಂದರವಾದ ಕಟ್ಟಡವಲ್ಲ ಫೋಟೋ ತೆಗೆಯಲು. ಎಲ್ಲರಂತೆ ನಾನೊಬ್ಬಳು. ಅದೇ ನಿಮ್ಮದೊಂದು ಫೋಟೋ ಕ್ಲಿಕ್ಕಿಸಬಹುದೇ ಎಂದು ಕೇಳಿದರೆ, ಖಂಡಿತ ಖುಷಿಯಾಗುತ್ತದೆ. ನನಗೂ ಅದರ ಬಗ್ಗೆ ಆಗ ಅರಿವಿರುತ್ತದೆ. ಜನರು ನನ್ನನ್ನು ಸುತ್ತುವರೆದಾಗ ನನಗೆ ತುಂಬ ಮುಜುಗರ ಉಂಟಾಗುತ್ತದೆ" ಎಂದು ನಟಿ ಹೇಳಿದ್ದಾರೆ,(ಏಜೆನ್ಸೀಸ್).