ವಾಷಿಂಗ್ಟನ್ ಡಿಸಿ: ಡೊನಾಲ್ಡ್ ಟ್ರಂಪ್(Donald Trump) ಸೋಮವಾರ(ಜನವರಿ 20) ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಅವರು ನಾಲ್ಕು ವರ್ಷಗಳ ನಂತರ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿದರು. ರಿಪಬ್ಲಿಕನ್ ಪಕ್ಷದ ನಾಯಕ 78 ವರ್ಷದ ಟ್ರಂಪ್ ಅವರು ಪ್ರಬಲ ಮತ್ತು ಶಕ್ತಿಯುತ ಅಧ್ಯಕ್ಷರಾಗಿ ಶ್ವೇತಭವನಕ್ಕೆ ಮರಳಿದ್ದಾರೆ.
ಇದನ್ನು ಓದಿ: ನಾವು ಅಮೆರಿಕನ್ನರಲ್ಲ; ಟ್ರಂಪ್ ಬೆದರಿಕೆಗೆ ಜಸ್ಟಿನ್ ಟ್ರುಡೊ ರಿಯಾಕ್ಷನ್ ಹೀಗಿದೆ.. | Justin Trudeau
ಪಟ್ಟಾಭಿಷೇಕದ ಬಳಿಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರದ ಕೆಲವು ಭರವಸೆಗಳನ್ನು ಪೂರೈಸಲು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದರು. ಡೊನಾಲ್ಡ್ ಟ್ರಂಪ್ ಅವರ ಮೊದಲ ಕಾರ್ಯನಿರ್ವಾಹಕ ಆದೇಶ ಮತ್ತು ಕ್ರಮಗಳು ವಲಸೆ ಮತ್ತು ಇಂಧನ ನೀತಿಯಿಂದ ರಾಷ್ಟ್ರೀಯ ಭದ್ರತೆ ಮತ್ತು ಫೆಡರಲ್ ಕಾರ್ಯಪಡೆಯವರೆಗಿನ ಸಮಸ್ಯೆಗಳನ್ನು ಗುರಿಯಾಗಿಸಿಕೊಂಡಿವೆ. ಹಲವಾರು ಕ್ಷೇತ್ರಗಳಲ್ಲಿ ಅಮೆರಿಕ ನೀತಿಗಳನ್ನು ಆಕ್ರಮಣಕಾರಿಯಾಗಿ ಬದಲಾಯಿಸುವುದಾಗಿ ಅವರು ಭರವಸೆ ನೀಡಿದಂತೆ, ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಳ್ಳುವುದಾಗಿ ಶ್ವೇತಭವನ ಘೋಷಿಸಿತು.
ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಟ್ರಂಪ್ ದೂರವಿದ್ದರು. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಪ್ಪಿಸಲು ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಲು ವಿಶ್ವದ ದೇಶಗಳು ಈ ಒಪ್ಪಂದವನ್ನು ಮಾಡಿಕೊಂಡಿವೆ. ಟ್ರಂಪ್ ಈ ಒಪ್ಪಂದವನ್ನು ವಂಚನೆ ಎಂದು ಕರೆದಿದ್ದಾರೆ. ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಕುರಿತು ತ್ವರಿತ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಮೆರಿಕದ ರಾಜಧಾನಿಯಲ್ಲಿ ವಿಪರೀತ ಚಳಿಯ ಕಾರಣ ಪ್ರಮಾಣವಚನ ಸಮಾರಂಭವನ್ನು ಕ್ಯಾಪಿಟಲ್ ರೊಟುಂಡಾದಲ್ಲಿ (ಸಂಸತ್ತಿನ ಭವನದ ಕೇಂದ್ರ ಕೊಠಡಿ) ನಡೆಸಲಾಯಿತು. ಮೊದಲು ಓಪನ್ ಸ್ಪೇಸ್ನಲ್ಲಿ ಆಯೋಜಿಸಲು ಯೋಜಿಸಲಾಗಿತ್ತು. ಟ್ರಂಪ್ ಅವರ ಪತ್ನಿ ಮೆಲಾನಿಯಾ, ಅವರ ಪುತ್ರಿ ಇವಾಂಕಾ ಮತ್ತು ಇವಾಂಕಾ ಅವರ ಪತಿ ಜೇರೆಡ್ ಕುಶ್ನರ್ ಮತ್ತು ಬಿಲಿಯನೇರ್‌ಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್, ಟಿಮ್ ಕುಕ್ ಸಮಾರಂಭದಲ್ಲಿ ಭಾಗವಹಿಸಿದ್ದರು.(ಏಜೆನ್ಸೀಸ್)