ನವದೆಹಲಿ: ಸಾವರ್ಜನಿಕರ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಈ ಘಟನೆ ನಡೆದಿದ್ದು, ಟ್ರಂಪ್ ಅವರ ಬಲ ಕಿವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಟ್ರಂಪ್ ಸಾರ್ವಜನಿಕ ರ್‍ಯಾಲಿಯೊಂದನ್ನು ಉದ್ಧೇಶಿಸಿ ಮಾತನಾಡುವ ವೇಳೆ ಗುಂಡಿನ ದಾಳಿ ನಡೆದಿದ್ದು, ಸ್ಫೋಟದ ಸದ್ದಿಗೆ ಟ್ರಂಪ್ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ವರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಸೀಕ್ರೆಟ್ ಸರ್ವೀಸ್ ಏಜೆಂಟ್‌ಗಳು ಟ್ರಂಪ್ ಅವರನ್ನು ತಕ್ಷಣವೇ ವೇದಿಕೆಯಿಂದ ಕೆಳಗಿಳಿಸಿದರು. ಈ ವೇಳೆ ಟ್ರಂಪ್ ಮುಖ ಹಾಗೂ ಕಿವಿ ಭಾಗ ರಕ್ತಸಿಕ್ತವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಅಟಾರ್ನಿ ರಿಚರ್ಡ್ ಗೋಲ್ಡಿಂಗರ್, ಟ್ರಂಪ್ ಅವರ ರ್‍ಯಾಲಿಯಲ್ಲಿ ಗುಂಡು ಹಾರಿಸಿದ ಆರೊಪಿಯನ್ನು ಕೊಲ್ಲಲಾಗಿದೆ. ಇದಲ್ಲದೆ ರ್‍ಯಾಲಿಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ. ಟ್ರಂಪ್ ಅವರ ಕಿವಿಗೆ ಗಾಯವಾಗಿದ್ದು, ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಅಟಾರ್ನಿ ರಿಚರ್ಡ್ ಗೋಲ್ಡಿಂಗರ್ ತಿಳಿಸಿದ್ದಾರೆ.
ಮಿಲ್ವಾಕಿಯಲ್ಲಿ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶ ಪ್ರಾರಂಭವಾಗುವ ಎರಡು ದಿನಗಳ ಮೊದಲು ಈ ಘಟನೆ ನಡೆದಿದ್ದು, ಟ್ರಂಪ್ ಅವರನ್ನು ಗುರಿಯಾಗಿಸಿ ಈ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 1981 ರಲ್ಲಿ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಇದು ಮೊದಲ ಹತ್ಯೆಯ ಪ್ರಯತ್ನವಾಗಿದೆ.