Donald Trump: ಇತರೆ ದೇಶಗಳ ನಡುವಿನ ಯುದ್ಧ ಸಂಘರ್ಷಗಳನ್ನು ಕದನ ವಿರಾಮ ಘೋಷಿಸುವ ಮೂಲಕ ಒಪ್ಪಂದಕ್ಕೆ ಸಹಿ ಹಾಕಿಸಲು ಶತಾಯಗತಾಯ ಪ್ರಯತ್ನಕ್ಕಿಳಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾ ವಿರುದ್ಧ ತಿರುಗಿಬಿದ್ದಿದ್ದಾರೆ.
ಇದನ್ನು ಓದಿ: 17ನೇ ವಯಸ್ಸಿಗೆ ಶಾಲೆ ಬಿಟ್ಟ.. 20ನೇ ವಯಸ್ಸಿಗೆ ಕ್ಯಾನ್ಸರ್ ಗೆದ್ದ! ಕಂಡ ಕನಸು ನನಸು ಮಾಡಿಕೊಂಡ ಯುವಕ | Beat Cancer
ಕಳೆದ ವರ್ಷಗಳಿಂದ ಯುಕ್ರೇನ್ ಮೇಲೆ ತೀವ್ರ ಯುದ್ಧ ದಾಳಿ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಯುದ್ಧವನ್ನು ಕೈಬಿಡುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ರಷ್ಯಾ ನಿರಂತರ ದಾಳಿಯಿಂದ ಭಾಗಶಃ ತತ್ತರಿಸಿ ಹೋಗಿರುವ ಯುಕ್ರೇನ್ಗೆ ಸಹಾಯಹಸ್ತದ ಅಗತ್ಯ, ಅನಿವಾರ್ಯತೆ ಎದುರಾಗಿದೆ. ಇದೇ ಸಮಯಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದು, ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಯುದ್ಧವನ್ನು ನಿಲ್ಲಿಸುವ ಭರವಸೆ ನೀಡಿದ್ದಾರೆ.
ಈ ಹಿಂದೆಯೇ ರಷ್ಯಾಗೆ ಖಡಕ್ ಎಚ್ಚರಿಕೆ ರವಾನಿಸಿದ್ದ ಟ್ರಂಪ್, ಶೀಘ್ರವೇ ಯುಕ್ರೇನ್ ಮೇಲಿನ ಯುದ್ಧವನ್ನು ಕೈಬಿಡಬೇಕು. ಇಲ್ಲದೆ ಹೋದರೆ, ರಷ್ಯಾಗೆ ಭಾರೀ ಸುಂಕವನ್ನು ವಿಧಿಸಲಾಗುವುದು. ಶೇ.500ರಷ್ಟು ಹೆಚ್ಚಿಸಿದರೂ ಆಶ್ಚರ್ಯ ಬೇಡ ಎಂದಿದ್ದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪುಟಿನ್ ರಾಷ್ಟ್ರ, ಎಷ್ಟು ಬೇಕಾದರೂ ಸುಂಕ ವಿಧಿಸಿಕೊಳ್ಳಿ ಎಂದು ಟ್ರಂಪ್ ಮಾತನ್ನು ತಳ್ಳಿಹಾಕಿತ್ತು. ಆದರೀಗ, ಮತ್ತೊಮ್ಮೆ ಕಿಡಿಕಾರಿರುವ ಡೊನಾಲ್ಡ್ ಟ್ರಂಪ್, ಮುಂದಿನ 10ರಿಂದ 12 ದಿನಗಳಲ್ಲಿ ಯುದ್ಧ ನಿಲ್ಲಿಸಲೇಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನು ಓದಿ: ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್! ಯೆಮೆನ್ ದೇಶ ವಿಧಿಸಿದ್ದ ಗಲ್ಲುಶಿಕ್ಷೆ ರದ್ದು: ವರದಿ | Nimisha Priya
"ಯುಕ್ರೇನ್ ವಿರುದ್ಧದ ಯುದ್ಧವನ್ನು ನಿಲ್ಲಿಸಿ, ಶಾಂತಿ ಒಪ್ಪಂದ ಮಾಡಿಕೊಳ್ಳಲು ರಷ್ಯಾಗೆ ಮುಂದಿನ 10ರಿಂದ 12 ದಿನಗಳು ಮಾತ್ರ ಬಾಕಿಯಿದೆ" ಎಂಬ ಹೊಸ ಗಡುವನ್ನು ಅಮೆರಿಕ ಅಧ್ಯಕ್ಷರು ನಿಗದಿಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಕಾಟ್ಲೆಂಡ್‌ನಲ್ಲಿ ಮಾತನಾಡಿದ ಟ್ರಂಪ್, "ಈ ಹಿಂದೆ 50 ದಿನಗಳ ಡೆಡ್ಲೈನ್ ಅನ್ನು ಕೊಡಲಾಗಿತ್ತು. ಆದರೆ, ಪುಟಿನ್ ನಡೆ ನನಗೆ ಕಿಂಚಿತ್ತು ಹಿಡಿಸುತ್ತಿಲ್ಲ. ಅದು ತೀರ ಕೆರಳಿಸಿದೆ. ಹೀಗಾಗಿ, ಗಡುವನ್ನು 12 ದಿನಗಳಿಗೆ ಇಳಿಸಿದ್ದೇವೆ. ಇನ್ನೂ ಕಾಯುವ ಮಾತಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).