ನ್ಯೂಸ್

ಖಂಡಿತ ಇಲ್ಲ... ಸುಂಕ ವಿವಾದದ ನಡುವೆ ಮತ್ತೊಂದು ಬಾಂಬ್ ಸಿಡಿಸಿದ ಡೊನಾಲ್ಡ್ ಟ್ರಂಪ್! Donald Trump

Donald Trump : ಭಾರತೀಯ ಆಮದುಗಳ ಮೇಲೆ ಶೇ. 50 ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಮತ್ತೊಂದು ಬಾಂಬ್​ ಸಿಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಸುಂಕದ ಕುರಿತಾದ ವಿವಾದ ಬಗೆಹರಿಯುವವರೆಗೆ ಭಾರತದೊಂದಿಗೆ ಯಾವುದೇ ವ್ಯಾಪಾರ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಅತ್ಯಧಿಕ ಸುಂಕ ವಿಧಿಸಿದ್ದೀರಿ, ಈ ಕುರಿತಾಗಿ ಭಾರತದ ಜೊತೆ ಹೆಚ್ಚಿನ ಸಂಧಾನ ಮಾತುಕತೆಯನ್ನು ನಿರೀಕ್ಷೆ ಮಾಡಬಹುದೇ ಎಂದು ಶ್ವೇತಭವನ ಓವಲ್​ ಕಚೇರಿಯಲ್ಲಿ ಸುದ್ದಿ ಸಂಸ್ಥೆ ಎಎನ್​ಐ ಪ್ರಶ್ನೆ ಮಾಡಿತು. ಇದಕ್ಕೆ ಉತ್ತರ ನೀಡಿದ ಟ್ರಂಪ್​, ಸುಂಕ ವಿವಾದ ಪರಹರಿಸುವವರೆಗೆ ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದರು. ಇದರಿಂದ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಅಂದಹಾಗೆ, ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶವನ್ನು ಬುಧವಾರ (ಆಗಸ್ಟ್​ 06) ಅಮೆರಿಕ ಹೊರಡಿಸಿದೆ. ಈ ಮೂಲಕ ಒಟ್ಟು ಸುಂಕವನ್ನು 50% ಕ್ಕೆ ಹೆಚ್ಚಿಸಿದೆ. ಇದನ್ನು ಸಮರ್ಥಿಸಿಕೊಂಡಿರುವ ಅಮೆರಿಕ, ಈ ನಿರ್ಧಾರದ ಹಿಂದೆ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕಾಳಜಿ ಇದೆ ಎಂದಿದೆ. ಅದರಲ್ಲೂ ನಿರ್ದಿಷ್ಟವಾಗಿ ಭಾರತ, ನಿರಂತರವಾಗಿ ರಷ್ಯಾದ ತೈಲ ಆಮದುಗಳನ್ನು ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದಿದೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಆರಂಭಿಕ 25% ಸುಂಕವು ಆಗಸ್ಟ್ 7 ರಂದು ಜಾರಿಗೆ ಬಂದಿದೆ. ಹೆಚ್ಚುವರಿ ಸುಂಕವು 21 ದಿನಗಳಲ್ಲಿ ಜಾರಿಗೆ ಬರಲಿದ್ದು, ಅಮೆರಿಕದ ಬಂದರುಗಳಿಗೆ ಪ್ರವೇಶಿಸುವ ಎಲ್ಲಾ ಭಾರತೀಯ ಸರಕುಗಳಿಗೆ ಇದು ಅನ್ವಯಿಸುತ್ತದೆ. ಈಗಾಗಲೇ ಸಾಗಣೆಯಲ್ಲಿರುವ ವಸ್ತುಗಳು ಮತ್ತು ಕೆಲವು ವಿನಾಯಿತಿ ಪಡೆದ ವರ್ಗಗಳಿಗೆ ಸುಂಕ ವಿನಾಯಿತಿಗಳಿವೆ. ಆದರೆ, 50 ರಷ್ಟು ಸುಂಕ ಜಾರಿಯಾದರೆ, ಭಾರತದ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ಸಮುದ್ರಾಹಾರ, ಜವಳಿ, ಆಭರಣಗಳು ಮತ್ತು ಆಟೋ ವಲಯಗಳ ಮೇಲೆ ಪರಿಣಾಮ ಬೀರಲಿದೆ. ಇದರ ಜೊತೆಗೆ, ಉದ್ಯೋಗ ನಷ್ಟ ಮತ್ತು ಆರ್ಥಿಕ ಕುಸಿತ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇನ್ನು ನವದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಷಣ ಮಾಡುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟವಾಗಿ ಪ್ರತಿಕ್ರಿಯಿಸಿದರು. ಆರ್ಥಿಕ ಒತ್ತಡದ ನಡುವೆಯೂ ನಾವು ನಮ್ಮ ಹಿತಾಸಕ್ತಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. ನಮಗೆ, ನಮ್ಮ ರೈತರ ಹಿತಾಸಕ್ತಿ ಪ್ರಮುಖ ಆದ್ಯತೆಯಾಗಿದೆ. ಭಾರತವು ರೈತರು, ಮೀನುಗಾರರು ಮತ್ತು ಹೈನುಗಾರರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ ಮತ್ತು ನಾನು ಅದಕ್ಕೆ ಸಿದ್ಧನಿದ್ದೇನೆ ಮತ್ತು ಭಾರತ ಕುಡ ಅದಕ್ಕೆ ಸಿದ್ಧವಾಗಿದೆ ಎಂದರು.

ಅಂದಹಾಗೆ, ಕೃಷಿ ಮತ್ತು ಹೈನುಗಾರಿಕೆಯಂತಹ ಸೂಕ್ಷ್ಮ ವಲಯಗಳನ್ನು ಅಂತಾರಾಷ್ಟ್ರೀಯ ಸ್ಪರ್ಧೆಗೆ ಒಡ್ಡುವುದನ್ನು ಭಾರತ ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಭಾರತ, ಇದು ಲಕ್ಷಾಂತರ ಗ್ರಾಮೀಣ ಜೀವನೋಪಾಯದ ಮೇಲೆ ಸಂಭಾವ್ಯ ಪರಿಣಾಮವನ್ನು ಬೀರುತ್ತದೆ ಎಂದಿದೆ. ಇನ್ನು ಉಭಯ ದೇಶಗಳು ತಮ್ಮ ಆರ್ಥಿಕ ನೀತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದರಿಂದ, ಈ ಬಿಕ್ಕಟ್ಟು ಎರಡೂ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯಲ್ಲಿ ತೀವ್ರ ಏರಿಕೆಯನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)