ನ್ಯೂಸ್

ಎಲಾನ್​ ಮಸ್ಕ್​​ ಜತೆಗಿನ ಸಂದರ್ಶನದ ಮಾಹಿತಿ ಹಂಚಿಕೊಂಡ ಡೊನಾಲ್ಡ್​​ ಟ್ರಂಪ್​​​

ವಾಷಿಂಗ್ಟನ್​ಡಿಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ (ಆಗಸ್ಟ್ 12) ಟೆಕ್ ದಿಗ್ಗಜ ಎಲಾನ್​ ಮಸ್ಕ್ ಅವರಿಗೆ ಸಂದರ್ಶನ ನೀಡುವುದಾಗಿ ತಿಳಿಸಿದ್ದಾರೆ.

ಸೋಮವಾರ ರಾತ್ರಿ ನಾನು ಎಲಾನ್​ ಮಸ್ಕ್ ಅವರೊಂದಿಗೆ ಪ್ರಮುಖ ಸಂದರ್ಶನವನ್ನು ಮಾಡಲಿದ್ದೇನೆ ಎಂದು ಡೊನಾಲ್ಡ್​​ ಟ್ರಂಪ್​​​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ದಿ ಹಿಲ್ ಪತ್ರಿಕೆ ಸೇರಿದಂತೆ ಯುಎಸ್ ಪ್ರಕಟಣೆಗಳು ವರದಿ ಮಾಡಿದಂತೆ ವಿವರಗಳನ್ನು ನಂತರ ಬಿಡುಗಡೆ ಮಾಡಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ. ಈ ಸಂದರ್ಶನದ ಸಮಯ ಮತ್ತು ನಿಖರವಾದ ವಿವರಗಳನ್ನು ಇನ್ನೂ ಪ್ರಕಟಿಸಬೇಕಾಗಿದೆ.

ಇತ್ತೀಚೆಗೆ ಲೈವ್ ಸ್ಟ್ರೀಮರ್ ಐಡೆನ್ ರಾಸ್ ಅವರ ಮಾರ್​​ ಎ ಲಾಗೊ ನಿವಾಸದಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯನ್ನು ಸಂದರ್ಶಿಸಿದ್ದರು. ರಾಸ್ ಅವರೊಂದಿಗಿನ ಸಂದರ್ಶನವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ‘ಕಿಕ್’ ವೀಕ್ಷಕರಲ್ಲಿ ಹೊಸ ದಾಖಲೆಯನ್ನು ಸಾಧಿಸಲು ಸಹಾಯ ಮಾಡಿದೆ ಎಂದು ವರದಿಯಾಗಿದೆ. ಇದು ಮಾಧ್ಯಮದಲ್ಲಿ ಟ್ರಂಪ್​ಗಿರುವ ಕ್ರೇಜ್​ ಅನ್ನು ತೋರಿಸುತ್ತದೆ.

ಕಳೆದ ತಿಂಗಳು ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್​ ಟ್ರಂಪ್​​ ಅವರ ಮೇಲಿನ ಹತ್ಯೆ ಪ್ರಯತ್ನದ ನಂತರ ಎಲಾನ್​​ ಮಸ್ಕ್​​ ಟ್ರಂಪ್​​​ ಅವರ ಉಮೇದುವಾರಿಕೆಯನ್ನು ಅನುಮೋದಿಸಿದರು. ಅದಷ್ಟೆ ಅಲ್ಲದೆ ಮಸ್ಕ್​​ ಟ್ರಂಪ್​​​​ ಅವರ ಅಧ್ಯಕ್ಷೀಯ ಪ್ರಚಾರದ ಬೆಂಬಲಿಗರಾಗಿದ್ದಾರೆ. ಈ ಸಂದರ್ಶನದ ಕುರಿತು ಎಲಾನ್​ ಮಸ್ಕ್​ ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಡೆಮೋಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಟಿಮ್ ವಾಲ್ಜ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಸಂದರ್ಭದಲ್ಲಿ ಟ್ರಂಪ್ ಅವರ ಈ ನಿರ್ಧಾರ ಬಂದಿದೆ.

ಕ್ಯಾಪಿಟಲ್ ಹಿಲ್ ಮೇಲಿನ ದಾಳಿಯ ನಂತರ 2021 ಜನವರಿ 6ರಂದು ಸಾಮಾಜಿಕ ಜಾಲತಾಣದ ಪ್ಲಾಟ್​​ಫಾರ್ಮ್​ ಟ್ರಂಪ್​ ಅವರ ಟ್ವಿಟರ್​ (ಪ್ರಸ್ತುತ ಎಕ್ಸ್​​ ಕರೆಯಲಾಗುತ್ತಿರುವ)​​ ಖಾತೆಯನ್ನು ಶಾಶ್ವತವಾಗಿ ನಿಷೇಧಿಸಿತ್ತು. ಇದರ ನಂತರ ಡೊನಾಲ್ಡ್​ ಟ್ರಂಪ್​ ಅವರು ತಮ್ಮದೇ ಆದ ಸಾಮಾಜಿಕ ಜಾಲತಾಣದ ವೇದಿಕೆಯನ್ನು ಪ್ರಾರಂಭಿಸಿದರು. ಆದರೆ ಟ್ವಿಟರ್​ ಅನ್ನು ಎಲಾನ್​ ಮಸ್ಕ್​ ಸ್ವಾಧೀನಪಡಿಸಿಕೊಂಡ ಬಳಿಕ ಡೊನಾಲ್ಡ್​ ಟ್ರಂಪ್​​ ಅವರ ಎಕ್ಸ್​​ ಖಾತೆಯನ್ನು ಮರುಸ್ಥಾಪಿಸಲಾಯಿತು. (ಏಜೆನ್ಸೀಸ್​​)