ನ್ಯೂಸ್

ಈ ಸಿನಿಮಾ ಗೆಲ್ಲಲಿ-ಸೋಲಲ್ಲಿ, ನಾನ್ ಮದುವೆ ಆಗೋದು ಪಕ್ಕಾ: ಡಾಲಿ ಧನಂಜಯ್

ಬೆಂಗಳೂರು: ತಮ್ಮ ನಟನೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಡಾಲಿ ಧನಂಜಯ್ ಕನ್ನಡ ಮಾತ್ರವಲ್ಲೇ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನ್​ 14ರಂದು ಅವರು ನಾಯಕನಾಗಿ ನಟಿಸಿರುವ ಕೋಟಿ ಚಿತ್ರ ತೆರೆಕಾಣಲಿದ್ದು, ಈ ಚಿತ್ರದ ಬಗ್ಗೆ ಸಿನಿರಸಿಕರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಈಗಾಗಲೇ ಟೀಸರ್​​, ಫಸ್ಟ್​ಲುಕ್​ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕೋಟಿ ಸಿನಿಮಾದ ಟ್ರೈಲರ್​ ಬಿಡುಗಡೆ ಸಮಾರಂಭವನ್ನು ಚಿತ್ರತಂಡ ಹಮ್ಮಿಕೊಂಡಿತ್ತು. ಈ ವೇಳೆ ಮಾತನಾಡಿದ ಧನಂಜಯ್​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ತಮ್ಮ ಮದುವೆಯ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ವರ್ಷಗಳು ಹೋಗುತ್ತಾ ಇರುತ್ತದೆ. ಅದು ಗೊತ್ತಾಗುವುದೇ ಇಲ್ಲ. ಸಿನಿಮಾದವರಿಗೆ ವಯಸ್ಸಾಗುವುದು ಗೊತ್ತಾಗಲ್ಲ, ಸತ್ತು ಹೋಗುವುದೂ ಗೊತ್ತಾಗಲ್ಲ. ಒಂದು ಸಿನಿಮಾ ಮಾಡೋದ್ರೋಳಗೆ ಎರಡು ವರ್ಷ ಕಳೆದು ಹೋಗಿರುತ್ತದೆ. ರೋಡಲ್ಲಿ ಫೋಟೋ ತೆಗೆಸಿಕೊಳ್ಳುವವರು ಕೂಡ ಮದುವೆ ಯಾವಾಗ ಅಂತ ಕೇಳುವ ಹಾಗೆ ಆಗಿದೆ.

ಪ್ರಮಾಣ ಮಾಡಿದ್ದೀನಿ. ಕೋಟಿ ಸಿನಿಮಾ ಚೆನ್ನಾಗಿ ಆದರೆ ಪಕ್ಕಾ ಮದುವೆ. ಚೆನ್ನಾಗಿ ಆಗಿಲ್ಲ ಅಂದರೂ ಬಿಡಲ್ಲ, ತಾರಮ್ಮನೇ ಮದುವೆ ಮಾಡಿಸಿ ಬಿಡುತ್ತಾರೆ. ಕೋಟಿ ಸಿನಿಮಾ ಹಿಟ್ ಆಗುತ್ತದೆ. ಯಾಕೆಂದರೆ ಈ ಸಿನಿಮಾ ತುಂಬಾ ಚೆನ್ನಾಗಿದೆ. ದಯವಿಟ್ಟು ನಮ್ಮನ್ನು ಬೆಂಬಲಿಸಿ ಎಂದು ನಟ ಡಾಲಿ ಧನಂಜಯ್​ ಮನವಿ ಮಾಡಿದ್ದಾರೆ.

ಪರಮೇಶ್ವರ್ ಗುಂಡ್ಕಲ್​ ನಿರ್ದೇಶಿಸಿರುವ ಕೋಟಿ ಸಿನಿಮಾದಲ್ಲಿ ಡಾಲಿ ಧನಂಜಯ್​ ನಾಯಕನಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಮೋಕ್ಷಾ ಕುಶಾಲ್​ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ರಂಗಾಯಣ ರಘು, ತಾರಾ ಅನುರಾಧಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗೆ ವಾಸುಕಿ ವೈಭವ್‌ ಹಾಡುಗಳನ್ನು ಸಂಯೋಜನೆ ಮಾಡಿದ್ದರೆ, ನೊಬಿನ್‌ ಪೌಲ್‌ ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾಗೆ ಅರುಣ್‌ ಬ್ರಹ್ಮನ್‌ ಛಾಯಾಗ್ರಹಣ ಈ ಚಿತ್ರಕ್ಕಿದೆ.