ನ್ಯೂಸ್

ಬೆಂಗ್ಳೂರಲ್ಲಿ ಮಾಂಸಕ್ಕಾಗಿ ನಾಯಿ ಕಳ್ಳರ ಜಾಲ?

ಬೆಂಗಳೂರು: ಅಪ್ರಾಪ್ತ ಬಾಲಕರನ್ನು ಮುಂದಿಟ್ಟುಕೊಂಡು ಮಾಂಸಕ್ಕಾಗಿ ಬೀದಿ ನಾಯಿಗಳನ್ನು ಹಿಡಿಸುತ್ತಿದ್ದಾರೆ ಎಂಬ ಜಯನಗರದ 4ನೇ ಬ್ಲಾಕ್ ನಿವಾಸಿಗಳು ಜಾಲತಾಣದಲ್ಲಿ ಹರಿಯಬಿಟ್ಟಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಾಯಿ ಕಳ್ಳರು ಹಾಗೂ ಅದನ್ನು ಮಾಂಸದ ವ್ಯಾಪಾರಕ್ಕೆ ಬಳಸಿಕೊಳ್ಳುತ್ತಿರುವ ಅನುಮಾನ ವ್ಯಕ್ತವಾಗಿದೆ. ಶನಿವಾರ (ಮಾ.14) ಬೆಳ್ಳಂಬೆಳಗ್ಗೆ ಎಲ್ಲರ ವಾಟ್ಸ್​ಆಪ್​ಗಳಲ್ಲಿ ಈ ವಿಡಿಯೋ ಹರಿದಾಡಿತ್ತು. ಬಳಿಕ ತಿಲಕನಗರ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಿಸಿದಾಗ 10 ವರ್ಷದ ಬಾಲಕನನ್ನು ಸ್ಥಳೀಯರು ಹಿಡಿದಿಟ್ಟಿದ್ದರು.

ಬಾಲಕನಿಂದ ಆಗಿದ್ದೇನು?: ಬಾಲಕರ ಗುಂಪೊಂದು ವಾಲಿಬಾಲ್ ಆಟಕ್ಕೆ ಬಳಸುವ ನೆಟ್​ನೊಂದಿಗೆ (ಬಲೆ) ತೆರಳಿ ಬೀದಿ ನಾಯಿಗಳನ್ನು ಹಿಡಿದುಕೊಳ್ಳುತ್ತಿತ್ತು. ಹಿಡಿದುಕೊಂಡು ಹೋಗುತ್ತಿದ್ದಾಗ ನಾಯಿಯ ಚೀರಾಟ ಕೇಳಿಸಿಕೊಂಡ ಸ್ಥಳೀಯರು, ಮನೆಯಿಂದ ಹೊರಗೆ ಬಂದಿದ್ದಾರೆ. ಪುಟ್ಟ ಮಕ್ಕಳ ಜತೆ ಹೋಗುತ್ತಿದ್ದ ಗುಂಪಿನಲ್ಲಿದ್ದವನನ್ನು ತಡೆದು, ನಾಯಿ ಹಿಡಿಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಆಗ ಆತ ಕಾರ್ಪೆರೇಷನ್​ನವರು ಎಂದಾಗ, ಅಲ್ಲಿದ್ದವರು ಲೈಸನ್ಸ್ ಕೇಳಿದ್ದಾರೆ. ಭಯಗೊಂಡು ನಾಯಿ ಬಿಟ್ಟು ಓಡಿ ಹೋಗಿದ್ದಾನೆ. ಈ ಸಮಯದಲ್ಲಿ ಗುಂಪಿನಲ್ಲಿದ್ದ 10 ವರ್ಷದ ಬಾಲಕನನ್ನು ಸ್ಥಳೀಯರು ಹಿಡಿದಿದ್ದಾರೆ. ‘ನಮ್ಮ100’ ಮೂಲಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಚಿಕನ್​ನಲ್ಲಿ ನಾಯಿ ಮಾಂಸ ದಂಧೆ?: ಹೋಟೆಲ್​ಗಳಲ್ಲಿ ಮಾಂಸಹಾರ ಸೇವಿಸುವಾಗ ಹುಷಾರಾಗಿರಬೇಕು. ಅಧಿಕ ಲಾಭ ಗಳಿಸುವ ಉದ್ದೇಶದಿಂದ ನಾಯಿಗಳನ್ನು ಅಪಹರಿಸಿ ಹೋಟೆಲ್​ಗಳಲ್ಲಿನ ಕುರಿ ಮತ್ತು ಕೋಳಿ ಮಾಂಸದ ಊಟದಲ್ಲಿ ಬೆರೆಸಿ ಕೊಡುತ್ತಾರೆ. ಈ ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳುವಲ್ಲಿ ಕಳ್ಳರ ಚಾಲಾಕಿತ ಬಯಲಾಗಿದೆ. ಮಕ್ಕಳಾದರೆ ಪೊಲೀಸರು ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂಬ ಧೈರ್ಯ ಇದಕ್ಕೆ ಕಾರಣ. ಜಾಲದ ಹಿಂದಿರುವವರನ್ನು ಪತ್ತೆ ಹಚ್ಚಬೇಕು ಎಂದು ವಿಡಿಯೋದಲ್ಲಿರುವ ಸ್ಥಳೀಯರು ಮಾತನಾಡಿದ್ದಾರೆ. ನಾಯಿ ಮಾಂಸ ಮಾರಾಟ ಜಾಲ ಎಂಬುದನ್ನು ಪೂರ್ಣ ಒಪ್ಪಲು ಪೊಲೀಸರು ನಿರಾಕರಿಸಿದ್ದಾರೆ. ಆದರೆ ನಗರಗಳಲ್ಲಿ ಅತಿ ಕಡಿಮೆ ಬೆಲೆಗೆ ನಾಯಿ ಮಾಂಸವನ್ನು ಕೋಳಿ ಮಾಂಸದ ಜತೆಗೆ ಬೆರೆಸುವ ದಂಧೆ ಇದೆ. ಕಡಿಮೆ ಖರ್ಚು ಮಾಡಿ ಹೆಚ್ಚು ಲಾಭ ಗಳಿಸುವ ಹಿಂದೆ ಸ್ಥಳೀಯ ಆರೋಗ್ಯ ಅಧಿಕಾರಿಗಳು, ಕೆಲವೆಡೆ ಪೊಲೀಸರ ಸಹಕಾರವೂ ಇರುತ್ತದೆ ಎಂಬ ಮಾತುಗಳಿವೆ.