ಮಾಲೀಕನ ಜೀವ ಉಳಿಸಿದ ಹಾಲಿಯ ಸಾಹಸಕ್ಕೆ ಗೋಲ್ಡ್ ಮೆಡಲ್ 
ನ್ಯೂಸ್

ನಿಯತ್ತಿಗೆ ಇನ್ನೊಂದು ಹೆಸ್ರೇ ನಾಯಿ! ಮಾಲೀಕನ ಜೀವ ಉಳಿಸಿದ ಹಾಲಿಗೆ ಶೌರ್ಯ ಪ್ರಶಸ್ತಿ | Holly Dog Award

Holly Dog Award: ನಿಯತ್ತು ಅಂದ್ರೆ ಮೊದಲು ನೆನಪಾಗೋದೇ ನಾಯಿ. ಒಂದು ಹೊತ್ತು ಊಟ ಹಾಕಿದ್ರೂ ಸಾಕು, ಜೀವನಪೂರ್ತಿ ಪ್ರೀತಿ, ನಿಷ್ಠೆ ತೋರಿಸುತ್ತೆ. ಅದಕ್ಕೆ ಸಾಕ್ಷಿ ಬ್ರಿಟನ್‌ನ 7 ವರ್ಷದ ಶ್ವಾನ ಹಾಲಿ. ಮಾಲೀಕ ಅಪಘಾತದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾಗ, ಜನರ ಗಮನ ಸೆಳೆದು ನೆರವು ತರುವ ಮೂಲಕ ಆತನ ಜೀವ ಉಳಿಸುವಲ್ಲಿ ಹಾಲಿ ಪ್ರಮುಖ ಪಾತ್ರ ವಹಿಸಿದೆ. ಮಾಲೀಕನನ್ನು ರಕ್ಷಿಸಲು ತೋರಿದ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಇದೀಗ ಬ್ರಿಟನ್‌ನ ಪ್ರತಿಷ್ಠಿತ ಶೌರ್ಯ ಪ್ರಶಸ್ತಿ ಒಲಿದಿದ್ದು, ಹಾಲಿಯ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಜಾಕ್ ರಸ್ಸೆಲ್ ಟೆರಿಯರ್ ತಳಿಯ ಹಾಲಿ, ತನ್ನ ಮಾಲೀಕನನ್ನು ರಕ್ಷಿಸಲು ತೋರಿದ ಧೈರ್ಯಕ್ಕೆ ನವೆಂಬರ್ 27ರಂದು ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಾಣಿಗಳ ಕಲ್ಯಾಣ ಸಂಸ್ಥೆ (PDSA) ಗೋಲ್ಡ್ ಮೆಡಲ್ ನೀಡಿ ಗೌರವಿಸಲಾಗಿದೆ.

ಮಾಲೀಕನ ರಕ್ಷಣೆಗೆ ಜನರ ಮೊರೆ ಹೋದ ಹಾಲಿ

2026ರ ಜನವರಿ 3ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮಾಲೀಕ ನೈಜಲ್ ವಾಟ್ಮೋರ್ ಜತೆ ಬೆಳಗಿನ ವಾಕಿಂಗ್‌ಗೆ ಹೋಗಿದ್ದ ಹಾಲಿ, ಅವರು ಕಿರಿದಾದ ಓಣಿಯಲ್ಲಿ ಬಿದ್ದು ಪ್ರಜ್ಞೆ ತಪ್ಪಿದಾಗ ನೆರವಿಗೆ ಧಾವಿಸಿದೆ. ಜನರ ಓಡಾಟ ಕಡಿಮೆ ಇದ್ದ ಆ ಸ್ಥಳದಲ್ಲಿ ಮಾಲೀಕನನ್ನು ಕಂಡುಹಿಡಿಯುವುದು ಕಷ್ಟವಾಗಿತ್ತು.

ಆದರೆ ಹಾಲಿ ಮಾತ್ರ ಸುಮ್ಮನಿರಲಿಲ್ಲ. ಹತ್ತಿರದ ಕಾಲುದಾರಿಯತ್ತ ಪದೇಪದೇ ಓಡುತ್ತಾ ದಾರಿಹೋಕರ ಗಮನ ಸೆಳೆಯಲು ಪ್ರಯತ್ನಿಸಿದೆ. ನಾಯಿಯ ವರ್ತನೆ ಗಮನಿಸಿದ ಸ್ಥಳೀಯರೊಬ್ಬರು ಅದರ ಹಿಂದೆ ಹೋದಾಗ ಗಾಯಗೊಂಡು ಬಿದ್ದಿದ್ದ ನೈಜಲ್ ಪತ್ತೆಯಾಗಿದ್ದಾರೆ. ತಕ್ಷಣ ತುರ್ತು ಸೇವೆಗೆ ಮಾಹಿತಿ ನೀಡಲಾಗಿದ್ದು, ಆಂಬ್ಯುಲೆನ್ಸ್ ಬರುವವರೆಗೆ ಮತ್ತೊಬ್ಬರು ಹಾಲಿ ಮತ್ತು ಅದರ ಮಾಲೀಕನ ಜತೆಗಿದ್ದರು.

ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲು

ನೈಜಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಕನ್ಕಷನ್ (ಮೆದುಳಿಗೆ ಆಗುವ ಆಘಾತ), ಮುರಿದ ಪಕ್ಕೆಲುಬುಗಳು, ಭುಜದ ಗಾಯ, ತಲೆಗೆ ಪೆಟ್ಟು ಹಾಗೂ ರಕ್ತಸ್ರಾವವಾಗಿರುವುದು ಪತ್ತೆಯಾಗಿತ್ತು. ಅಪಘಾತದಿಂದ ಹೃದಯದ ಮೇಲೂ ಪರಿಣಾಮ ಉಂಟಾಗಿತ್ತು. ಅವರಿಗೆ ಆ ಘಟನೆಯ ಬಗ್ಗೆ ಹೆಚ್ಚಿನ ನೆನಪಿರಲಿಲ್ಲ. ಆಂಬ್ಯುಲೆನ್ಸ್‌ನಲ್ಲಿ ಪತ್ನಿ ಲಾರಾ ಜತೆ ಎಚ್ಚರವಾದ ಬಳಿಕವಷ್ಟೇ ಪರಿಸ್ಥಿತಿ ಅರಿವಿಗೆ ಬಂದಿತ್ತು.

ಹಾಲಿಯ ಪ್ರಯತ್ನದ ಬಗ್ಗೆ ಮಾತನಾಡಿದ ನೈಜಲ್, ‘ಅವಳು ತುಂಬಾ ಆತಂಕದಲ್ಲಿದ್ದರೂ ಪ್ರಯತ್ನ ಬಿಡಲಿಲ್ಲ’ ಎಂದಿದ್ದಾರೆ. ಅಲ್ಲದೆ, ‘ನಿಜಕ್ಕೂ ಅವಳು ನನ್ನ ಪಾಲಿಗೆ ದೇವತೆ’ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಶೌರ್ಯಕ್ಕೆ ಪ್ರತಿಷ್ಠಿತ ಗೌರವ

ಪ್ರಾಣಿಗಳ ಸಾಹಸ ಮತ್ತು ಜೀವ ಉಳಿಸುವ ಕಾರ್ಯಗಳನ್ನು ಗುರುತಿಸಿ ನೀಡುವ PDSA ಗೋಲ್ಡ್ ಮೆಡಲ್ ಅನ್ನು ಪ್ರಾಣಿಗಳ ಶೌರ್ಯಕ್ಕೆ ನೀಡುವ ಜಾರ್ಜ್ ಕ್ರಾಸ್‌ಗೆ ಸಮಾನವಾದ ಗೌರವವೆಂದು ಪರಿಗಣಿಸಲಾಗುತ್ತದೆ. ಲಂಡನ್‌ನಲ್ಲಿ ನಡೆದ ಪಿಡಿಎಸ್‌ಎ ಪ್ರಾಣಿ ಪ್ರಶಸ್ತಿ ಸಮಾರಂಭದಲ್ಲಿ ಹಾಲಿ ಸೇರಿದಂತೆ ಮೂರು ಪ್ರಾಣಿಗಳಿಗೆ ಗೌರವ ನೀಡಲಾಗಿದೆ.

ಇದನ್ನೂ ಓದಿ: ‘ಆಪರೇಷನ್ ಸಿಂಧೂರ್’ ಸಿನಿಮಾಗೆ ಅರ್ಜುನ್ ಸರ್ಜಾ ಆಕ್ಷನ್ ಕಟ್; ಅಯೋಧ್ಯೆಯಲ್ಲಿ ಮುಹೂರ್ತ | Operation Sindoor Movie

ಮಾಲೀಕ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲೂ ಹಾಲಿ ಅವರ ಬಗ್ಗೆ ಕಾಳಜಿ ವಹಿಸಿ, ಸದಾ ರಕ್ಷಣಾತ್ಮಕವಾಗಿ ವರ್ತಿಸುತ್ತಿತ್ತು. ತನ್ನ ಮಾಲೀಕನ ಜೀವ ಉಳಿಸಲು ಹಾಲಿ ತೋರಿದ ಸಮಯಪ್ರಜ್ಞೆ ಮತ್ತು ನಿಷ್ಠೆ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.