* ನನ್ನ ಮದುವೆಯಾಗಿ ಇಪ್ಪತ್ತು ವರ್ಷಗಳಾಗಿವೆ. ಮದುವೆಗೆ ಮುಂಚೆ ಕೆಲಸಕ್ಕೆ ಹೋಗುತ್ತಿದ್ದೆ. ಮದುವೆ ಆದ ಒಂದು ವರ್ಷದಲ್ಲಿ ಕೆಲಸ ಬಿಡಿಸಿದರು. ಈಗ
ಉತ್ತರ: ನಿಮ್ಮ ಪತಿಯ ಆಸ್ತಿಯಲ್ಲಿ ನಿಮ್ಮ ಪತಿ ಬದುಕಿರುವವರೆಗೆ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ನಿಮ್ಮ ಪತಿ ತೀರಿಕೊಂಡರೆ ಆಗ, ಅವರ ತಾಯಿಗೆ (ಅವರ ತಾಯಿ ಬದುಕಿದ್ದರೆ), ಅವರಿಗೆ ಒಂದು ಭಾಗ ನಿಮಗೆ ಒಂದು ಭಾಗ ಸಮವಾಗಿ ಸಿಗುತ್ತದೆ. ಅವರ ತಾಯಿ ಬದುಕಿಲ್ಲದೇ ಇದ್ದರೆ, ಆಗ ನಿಮಗೇ ಅವರ ಆಸ್ತಿ , (ನಿಮ್ಮ ಪತಿ ತೀರಿಕೊಂಡ ಮೇಲೆ) ಬರುತ್ತದೆ. ಮನೆಯಿಂದ ಹೊರಹಾಕುತ್ತಾರೆ ಎಂದು ಹೆದರಬೇಡಿ. ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಮಾಡಲು ಇರುವ ಕಾನೂನಿನ ಕೆಳಗೆ ನೀವು ಪ್ರಕರಣ ದಾಖಲಿಸಿ, ನಿಮ್ಮನ್ನು ಮನೆಯಿಂದ ಹೊರಹಾಕದಂತೆ ರಕ್ಷಣೆಯ ಆದೇಶವನ್ನು, ರೆಸಿಡೆನ್ಸ್ ಆರ್ಡರನ್ನು / ವಾಸದ ಹಕ್ಕಿನ ರಕ್ಷಣೆಯ ಆದೇಶವನ್ನು ಪಡೆಯಬಹುದು. ಹಾಗೆಯೇ ನೀವು ಜೀವನಾಂಶಕ್ಕಾಗಿ ಒಂದು ದಾವೆ ಹಾಕಿ, ಆ ದಾವೆಯಲ್ಲಿ, ನಿಮ್ಮ ಪತಿಯ ಹೆಸರಿನಲ್ಲಿ ಇರುವ ಮನೆಯ ಮೇಲೆ ಅಟ್ಯಾಚ್ಮೆಂಟ್ ಆದೇಶವನ್ನೂ ಪಡೆಯಬಹುದು. ಹೀಗಾಗಿ ಕೊಂಡುಕೊಳ್ಳುವವರಿಗೆ ಈ ವಿಷಯ ತಿಳಿದು ಅವರು ಹಿಂದೆ ಹೋಗಬಹುದು. ಅಥವಾ ಕೊಂಡುಕೊಂಡರೂ ಸಹ, ನಿಮ್ಮ ಜೀವನಾಂಶದ ಹಕ್ಕಿಗೆ ತೊಂದರೆ ಆಗುವುದಿಲ್ಲ. ಈ ಪ್ರಕರಣಗಳನ್ನು ದಾಖಲಿಸಲು ನೀವು ನಿಮ್ಮ ತಾಲ್ಲೂಕಿನ ಉಚಿತ ಕಾನೂನು ಸೇವಾ ಕೇಂದ್ರದ ಸಹಾಯ ಪಡೆಯಿರಿ. ಒಂದು ನಯಾ ಪೈಸೆಯ ಖರ್ಚೂ ಇಲ್ಲದೇ ನಿಮಗೆ ಕಾನೂನು ಸಹಾಯವನ್ನು ಒದಗಿಸಿಕೊಡುತ್ತಾರೆ.
* ನನ್ನ ಹೆಂಡತಿ ಮಗುವನ್ನು ಹೆತ್ತು ಮೂರು ತಿಂಗಳಾಗಿದೆ. ಈಗ ನಾನು ಅವಳ ವಿರುದ್ಧ ವಿಚ್ಛೇದನದ ಪ್ರಕರಣ ಹಾಕಬಹುದೇ? ಹಾಗೆ ಹಾಕಿದರೆ ನನಗೆ ಬೇಗ ವಿಚ್ಛೇದನ ಸಿಗುತ್ತದೆಯೇ?
ಉತ್ತರ: ವಿಚ್ಛೇದನವನ್ನು ಯಾವ ಕಾರಣದ ಆಧಾರದ ಮೇಲೆ ಹಾಕುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಕ್ರೂರತೆಯ ಆಧಾರದಿಂದ ಹಾಕಿದರೆ, ಮಗು ಆಕೆಯ ಗರ್ಭದಲ್ಲಿ ಬಂದ ದಿನಕ್ಕೆ ಹಿಂದಿನ ಕ್ರೂರತೆಯನ್ನು ನೀವು ಕ್ಷಮಿಸಿದ್ದೀರಿ ಎನ್ನುವ ನಿರ್ಣಯಕ್ಕೂ ನ್ಯಾಯಾಲಯ ಬರಬಹುದು. ಮೂರು ತಿಂಗಳ ಮಗು ಇರುವ ಸಂದರ್ಭದಲ್ಲಿ ಏಕಾಏಕಿ ವಿಚ್ಚೇದನದ ಪ್ರಕರಣ ದಾಖಲಿಸುವುದು ಸೂಕ್ತವಲ್ಲ. ಬದಲಿಗೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ನೋಡಿ. ಒಟ್ಟಾಗಿ ಇರಲು ಅಥವಾ ಇಬ್ಬರೂ ಒಪ್ಪಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೆದನ ಪಡೆಯುವ ನಿರ್ಧಾರಕ್ಕೆ ನೀವಿಬ್ಬರೂ ಬರಲು ಸಾಧ್ಯವೇ ಎಂದು ಮೊದಲಿಗೆ ಪ್ರಯತ್ನ ಮಾಡಿ ನೋಡಿ.
(ಲೇಖಕಿ ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು)