ನ್ಯೂಸ್

ಜೂ. 14ಕ್ಕೂ ಮೊದಲೇ ಲಾಕ್​ಡೌನ್​ ತೆರವು?; ಇಲ್ಲಿದೆ ಪಕ್ಕಾ ಸುಳಿವು...

Webdesk - Ravikanth

ಬೆಂಗಳೂರು: ಕರೊನಾ ನಿಯಂತ್ರಣಕ್ಕಾಗಿ ಮತ್ತೆ ಮತ್ತೆ ವಿಸ್ತರಣೆ ಮಾಡಲಾಗಿರುವ ಲಾಕ್​ಡೌನ್​ ಜೂ. 14ರ ಬಳಿಕವೂ ಪುನಃ ವಿಸ್ತರಣೆ ಆಗಲಿದೆಯೇ ಎಂಬ ಅನುಮಾನಗಳ ನಡುವೆಯೇ ಮತ್ತೊಂದು ಸಾಧ್ಯತೆಯೂ ಹೊರಬಿದ್ದಿದೆ. ಅದೇನೆಂದರೆ ನಿಗದಿತ ದಿನಾಂಕಕ್ಕೂ ಮೊದಲೇ ಲಾಕ್​ಡೌನ್​ ತೆರವಾಗುವ ಸಾಧ್ಯತೆಗಳೂ ನಿಚ್ಚಳವಾಗಿ ಕಾಣಿಸಲಾರಂಭಿಸಿವೆ.

ಸದ್ಯ ವಿಸ್ತರಣೆ ಮಾಡಲಾಗಿರುವ ಲಾಕ್​ಡೌನ್​ ಜೂ. 14ಕ್ಕೆ ಮುಗಿಯಲಿದೆ. ಮಾತ್ರವಲ್ಲ ರಾಜ್ಯದಲ್ಲಿ ವಿಸ್ತರಿತ ಲಾಕ್​ಡೌನ್​ನಿಂದಾಗಿ ಕರೊನಾ ಸೋಂಕಿತರ ಪ್ರಮಾಣಕ್ಕಿಂತ ಗುಣಮುಖರಾಗುವವರ ಸಂಖ್ಯೆಯೇ ಹೆಚ್ಚಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜೂ.14ಕ್ಕೆ ಲಾಕ್​ಡೌನ್​ ಕೊನೆಯಾಗುವುದು ಖಚಿತ ಎಂಬಂತಾಗಿದೆ. ಇದಕ್ಕೆ ಪೂರಕವೆಂಬಂತೆ ಸಿಎಂ ಕೂಡ ಮೊನ್ನೆ ಹೇಳಿಕೆ ನೀಡಿದ್ದರು. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.11.09ರಷ್ಟಿದ್ದು, ಅದು ಶೇ.05ಕ್ಕೆ ಬಂದರೆ ರಾಜ್ಯವನ್ನು ಅನ್​ಲಾಕ್ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ತಿಳಿಸಿದ್ದರು.

ಆದರೆ ಇದೀಗ ಮತ್ತೊಂದು ಸಾಧ್ಯತೆ ಬಹಿರಂಗಗೊಂಡಿದ್ದು, ಲಾಕ್​ಡೌನ್​ ಜೂ. 14ಕ್ಕೂ ಮೊದಲೇ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸಿವೆ. ಇದನ್ನು ಪುಷ್ಠೀಕರಿಸುವ ನಿಟ್ಟಿನಲ್ಲಿ ಕೆಎಸ್​ಆರ್​ಟಿಸಿಯಲ್ಲಿನ ಬೆಳವಣಿಗೆಗಳು ಕಂಡುಬಂದಿವೆ. ಅದೇನೆಂದರೆ ಜೂ. 8ರಿಂದಲೇ ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸಲಿವೆ. ಅದಕ್ಕಾಗಿ ಮುಂಚಿತವಾಗಿ ಆನ್​ಲೈನ್ ಬುಕಿಂಗ್​ಗೆ ಅವಕಾಶ ನೀಡಿರುವ ಕೆಎಸ್​ಆರ್​ಟಿಸಿ, ಜೂ. 8ರಂದೇ ಬಸ್​ಗಳು ರಸ್ತೆಗಿಳಿಯುವುದು ಪಕ್ಕಾ ಎಂಬ ಮಾಹಿತಿ ಬಿಟ್ಟುಕೊಟ್ಟಿದೆ. ಈ ಮೂಲಕ ಜೂ. 8ರಂದೇ ರಾಜ್ಯ ಅನ್​ಲಾಕ್​ ಆಗುವ ಸುಳಿವು ಹೊರಬಿದ್ದಿದ್ದು, ಅಂದೇ ಲಾಕ್​ಡೌನ್​ ಮುಕ್ತಾಯಗೊಂಡರೂ ಅಚ್ಚರಿ ಏನಿಲ್ಲ.