ನ್ಯೂಸ್

ಕೈ ಚುನಾವಣೆ ಆ್ಯಪ್​ ಹ್ಯಾಕ್?: ಮತದಾನ ವೇಳೆ ಹಲವು ಅಚ್ಚರಿ; ಕೊನೇ ಕ್ಷಣ ಪ್ರಬಲ ಅಭ್ಯರ್ಥಿ ಹಿಂದಕ್ಕೆ

narayancraya

ಬೆಂಗಳೂರು: ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಮೊದಲ ಹಂತದ ಚುನಾವಣೆ ನಡೆದಿದೆ. ಸೋಮವಾರ ಮತ್ತು ಮಂಗಳವಾರ 22 ಜಿಲ್ಲೆಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವೆರೆಗೆ ಮತದಾನ ನಡೆಯಲಿದೆ. ಮತದಾನಕ್ಕೆ ವೇದಿಕೆಯಾಗಿದ್ದ ಮೊಬೈಲ್ ಆ್ಯಪ್​ ಹ್ಯಾಕ್ ಆಗಿರುವ ಅನುಮಾನದ ಮಾತುಗಳು ಮತ್ತು ಪ್ರಬಲ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದು ವಿಶೇಷವಾಗಿ ಕಾಣಿಸಿದೆ. ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಿವಮೊಗ್ಗ, ಮೈಸೂರು ನಗರ, ಕೋಲಾರ, ಚಿಕ್ಕೋಡಿ, ಚಿತ್ರದುರ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಳಗಾವಿ ಗ್ರಾಮಾಂತರ, ಬೆಳಗಾವಿ ನಗರ, ಬಳ್ಳಾರಿ ನಗರ, ಬಾಗಲಕೋಟೆ, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಸರಿಸುಮಾರು 59 ಸಾವಿರ ಕಾರ್ಯಕರ್ತರು ಮತದಾನ ಮಾಡಿದ್ದಾರೆ.

ಈ ನಡುವೆ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟು ಕಣಕ್ಕಿಳಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅತ್ಯಾಪ್ತ ಮಿಥುನ್ ರೈ ಕೊನೇ ಕ್ಷಣದಲ್ಲಿ ಹಿಂದೆ ಸರಿದರು. ಈ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, ಮಂಗಳೂರಿನಲ್ಲಿ ಮಿಥುನ್ ರೈಗೆ ಹೆಚ್ಚಿನ ಜವಾಬ್ದಾರಿ ಇದೆ. ಹಿಂದೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಬೇರೆಯವರಲ್ಲಿ ಸ್ಪರ್ಧಿಸುವ ಉತ್ಸಾಹ ಇತ್ತು. ಮಿಥುನ್ ನನ್ನ ಆಪ್ತ. ನನ್ನ ಹೆಸರಿಂದ ಒಬ್ಬರಿಗೆ ಅನುಕೂಲವಾಗಿ ಮತ್ತೊಬ್ಬರಿಗೆ ಹಿನ್ನಡೆಯಾಗುವುದು ಬೇಡವೆಂದು ಕಣದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದೆ ಎಂಧರು. ಪಾರದರ್ಶಕ ಹಾಗೂ ಮುಕ್ತವಾಗಿ ಚುನಾವಣೆ ನಡೆಯಬೇಕು. ಪಕ್ಷದ ಅಧ್ಯಕ್ಷನಾಗಿ ನಾನು ಯಾರ ಪರವಾಗಿ ನಿಲ್ಲುವುದಿಲ್ಲ. ಯಾರಿಗೂ ವಿರೋಧ ಮಾಡುವುದಿಲ್ಲ. ಯಾರಿಗೆ ಆಸಕ್ತಿ ಇದೆಯೋ, ಯಾರು ಪಕ್ಷಕ್ಕೆ ಸಮಯ ಕೊಟ್ಟು ಸಂಘಟನೆಗೆ ಶ್ರಮಿಸುತ್ತಾರೋ ಅಂತಹವರನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ಮತದಾರರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಇನ್ನು ಮೊದಲ ಎರಡು ಅವಧಿಯಲ್ಲಿ ಮತದಾನಕ್ಕೆ ಬಳಕೆ ಮಾಡಿಕೊಳ್ಳಲಾಗಿದ್ದ ಮೊಬೈಲ್ ಆಪ್ ಕಿರಿಕಿರಿ ತಂದೊಡ್ಡಿತ್ತು. ಕೊನೆಯ ಒಂದು ಗಂಟೆಯಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ಮತದಾನವಾಗಿದೆ. ಇದು ಅಭ್ಯರ್ಥಿ ಪರವಾದವರಲ್ಲಿ ಸಂಶಯ ಹುಟ್ಟಿಸಿದೆ. ಆಪ್ ಹ್ಯಾಕ್ ಆಗಿತ್ತೆಂಬ ಬಲವಾದ ಸಂಶಯವಿದೆ. ಚುನಾವಣೆ ನಿರ್ವಹಿಸುತ್ತಿರುವವರ ಗಮನಕ್ಕೆ ತರುತ್ತೇವೆ ಎಂದು ಅಭ್ಯರ್ಥಿಯೊಬ್ಬರ ಪರ ಕೆಲಸ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಕೋಟಿ ಕೋಟಿ ವೆಚ್ಚ!

ಬೆಂಗಳೂರು ಮೂಲದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೊಬ್ಬರು ವಿಧಾನಸಭೆ ಚುನಾವಣೆಗೆ ಕಡಿಮೆ ಇಲ್ಲದಂತೆ ತಯಾರಿ ನಡೆಸಿದ್ದು, ಕೊನೇ ಹಂತದಲ್ಲಿ 5 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಇದು ಉಳಿದ ಅಭ್ಯರ್ಥಿಗಳಿಗೆ ಬೇಸರ ತರಿಸಿದೆ. ‘ಜಾತಿ- ಧರ್ಮ, ಹಣ ಬಲ, ಮುಖಂಡರ ಪ್ರಭಾವ ಹೊರತಾಗಿ ಪಾರದರ್ಶಕವಾಗಿ ಈ ಚುನಾವಣೆ ನಡೆಯಬೇಕೆಂಬುದು ನಮ್ಮ ನಾಯಕರಾದ ರಾಹುಲ್ ಗಾಂಧಿ ಆಶಯವಾಗಿತ್ತು. ಈಗ ಈ ಮಾರ್ಗದಲ್ಲಿ ಚುನಾವಣೆ ನಡೆದಂತೆ ಕಾಣಿಸಿಲ್ಲ’ ಎಂದು ಅಭ್ಯರ್ಥಿಯೊಬ್ಬರೇ ಉಸುರಿದ್ದಾರೆ.

ರೈತ ಕಾಯ್ದೆ ವಿರೋಧಿಸಿ ಹೋರಾಟ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ಸಂಬಂಧಿ ಕಾಯ್ದೆ ವಿರೋಧಿಸಿ ಹೋರಾಟ ರೂಪಿಸಲಾಗುತ್ತದೆ, ಈ ವಿಚಾರವಾಗಿ ಜೈಲಿಗೆ ಹೋಗಲು ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ‘ಬಿಜೆಪಿ ಸರ್ಕಾರದ ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು’ ಹೊತ್ತಿಗೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಪಿಎಂಸಿ ಕಾಯ್ದೆ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ವಾದ. ಆರಂಭದಲ್ಲಿ ಇದು ಲಾಭದಾಯಕವಾದರೂ ನಂತರದ ದಿನಗಳಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಸರ್ಕಾರದ ಉದ್ದೇಶ ಎಪಿಎಂಸಿಗಳನ್ನು ನಾಶ ಮಾಡುವುದು ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವುದಾಗಿದೆ ಎಂದರು.

‘ಬಿಜೆಪಿ ಸರ್ಕಾರದ ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು’ ಹೊತ್ತಿಗೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭಾನುವಾರ ಬಿಡುಗಡೆ ಮಾಡಿದರು. ಶಾಸಕ ಜಮೀರ್ ಅಹಮ್ಮದ್ ಮತ್ತಿತರರಿದ್ದರು.

ಸರ್ಕಾರ ತಿದ್ದುಪಡಿ ತಂದಿರುವಂತಹ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಭೂಮಿ ಖರೀದಿಸುವ ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ ಎಂದರು.

ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಲಾಗಿದೆ. ಕಾಯ್ದೆಯು ಅಕ್ರಮ ದಸ್ತಾನುಗಳ ಮೇಲೆ ದಾಳಿ ಮಾಡಿ, ಅಕ್ರಮ ಬಯಲಿಗೆಳೆಯಲು ಅವಕಾಶವಿಲ್ಲವಾಗಿದೆ, ಇದರಿಂದ ಕೃತಕ ಅಭಾವ ಸೃಷ್ಟಿ ಮಾಡಿ ಮಾರುಕಟ್ಟೆಯಲ್ಲಿ ಆ ವಸ್ತುವಿನ ಬೆಲೆ ಏರಿದ ನಂತರ ಮಾರುಕಟ್ಟೆಗೆ ಬಿಡುತ್ತಾರೆ. ಇಂತಹಾ ಕಾಯ್ದೆ ಜಾರಿಗೆ ತರುವ ಅಗತ್ಯವಿತ್ತೇ? ಎಂದು ಪ್ರಶ್ನಿಸಿದರು. ಒಂದು ಜತೆ ಎತ್ತಿಗೆ ಕನಿಷ್ಠ 2 ಲಕ್ಷ ರೂಪಾಯಿ ಇದೆ. ಅವುಗಳಿಗೆ ವಯಸ್ಸಾದ ಮೇಲೆ ಅವನ್ನು ಸಾಕಲು ಏಳು ಕೆ.ಜಿ ಮೇವು ಬೇಕು ಮತ್ತು ನಿತ್ಯ 100 ರೂಪಾಯಿ ಖರ್ಚಾಗುತ್ತದೆ. ಇದರ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಿಲ್ಲ. ಇಡೀ ದೇಶದಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಲಿ ಮತ್ತು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕೂಡ ನಿಷೇಧ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದ ಅವರು ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್​ನಿಂದ ಬರುವ ಹಸುವಿನ ಮಾಂಸ ಗೋಮಾತೆಯಾಗುವುದಿಲ್ಲವೇ? ಎಂದರು. ಪ್ರಧಾನಿ ಮೋದಿಯವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ಗ್ಯಾಸ್ ಬೆಲೆ 750 ರೂ.ಗೆ ಏರಿಕೆಯಾಗಿದೆ, ಮೋದಿಯವರು ಮಾತೆತ್ತಿದರೆ ಸಬ್ ಕ ಸಾಥ್ ಸಬ್ ಕ ವಿಕಾಸ್ ಅನ್ನುತ್ತಾರೆ, ಇವರ ಆಡಳಿತದಿಂದ ಸಾಮಾನ್ಯ ಜನರ ವಿಕಾಸವಂತೂ ಆಗಿಲ್ಲ ಎಂದರು.

ನಾನು ಶಾದಿ ಭಾಗ್ಯ ಯೋಜನೆ ತಂದಾಗ ಯಡಿಯೂರಪ್ಪ ವಿರೋಧಿಸಿದರು. ಆದರೆ, ಈಗ ಬ್ರಾಹ್ಮಣರಿಗೆ ಕೊಡುತ್ತಿದ್ದಾರೆ. ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿಲ್ಲ. ಎಲ್ಲ ಬಡವರಿಗೆ ನೀಡಲಿ ಎಂದು ಹೇಳುತ್ತಿದ್ದೇನೆ. ಬಡವರಿಗಾಗಿ ತಂದ ಅನೇಕ ಯೋಜನೆ ನಿಲ್ಲಿಸಿದ್ದಾರೆ. ಕೇಳಿದರೆ ಕರೊನಾದಿಂದ ಹಣವಿಲ್ಲ ಎನ್ನುತ್ತಾರೆ. ತೆರಿಗೆ ವಸೂಲಿ ಚೆನ್ನಾಗಿ ಆಗುತ್ತಿದೆ ಎನ್ನುತ್ತಿದ್ದಾರೆ, ಆದರೆ, ದುಡ್ಡಿಲ್ಲ ಎನ್ನುತ್ತಿರುವ ಬಿಜೆಪಿಯ ದರಿದ್ರ ಸರ್ಕಾರ ಇದು.

| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ