| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಸ ಇತಿಹಾಸ ಸೃಷ್ಟಿಸುವರೇ? ರಾಜ್ಯದ ರಾಜಕೀಯ ವಲಯದಲ್ಲಿ ಈ ಸದ್ಯಕ್ಕೆ ಕೇಳಿಬರುತ್ತಿರುವ ಪ್ರಶ್ನೆ ಇದಾಗಿದೆ.
ರಾಜ್ಯದಲ್ಲಿ ಕಳೆದ 38 ವರ್ಷಗಳ ಅವಧಿಯಲ್ಲಿ ನಡೆದಿರುವ ಏಳು ಚುನಾವಣೆಗಳಲ್ಲಿ ಆಡಳಿತದಲ್ಲಿದ್ದ ಪಕ್ಷ ಮತ್ತೊಮ್ಮೆ ಬಹುಮತ ಗಳಿಸಿ ಅಧಿಕಾರ ಹಿಡಿದ ಉದಾಹರಣೆ ಇಲ್ಲ. ರಾಮಕೃಷ್ಣ ಹೆಗಡೆ ಮಾತ್ರ 1985ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದರು. ಆ ನಂತರ ಅವಕಾಶ ಯಾರಿಗೂ ಸಿಕ್ಕಿಲ್ಲ. ಈ ಬಾರಿ ಮತ್ತೆ ಅಧಿಕಾರ ಹಿಡಿಯುವ ಬಗ್ಗೆ ಅತ್ಯಂತ ಹೆಚ್ಚಿನ ವಿಶ್ವಾಸದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಂದ ಇತಿಹಾಸ ಸೃಷ್ಟಿ ಸಾಧ್ಯವೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ.
ರಾಜ್ಯದಲ್ಲಿ 1990ರಿಂದ ಕಾಂಗ್ರೆಸ್, ಬಿಜೆಪಿ, ಜನತಾದಳ ಪಕ್ಷಗಳು ಪ್ರಬಲವಾಗಿವೆ. ರಾಜ್ಯದಲ್ಲಿ ಏಕ ಪಕ್ಷದ ಆಡಳಿತ ಹಾಗೂ ಸಮ್ಮಿಶ್ರ ಸರ್ಕಾರ ಎರಡನ್ನು ಜನ ನೋಡಿದ್ದಾರೆ. ಆದರೂ ಅಧಿಕಾರದಲ್ಲಿದ್ದ ಪಕ್ಷವನ್ನು ಮಾತ್ರ ಮತ್ತೊಂದು ಅವಧಿಗೆ ಆಯ್ಕೆ ಮಾಡಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಮತಗಳ ಗಳಿಕೆಯ ಆಧಾರದಲ್ಲಿ ಸೀಟುಗಳ ಗಳಿಕೆ ಆಗುವುದಿಲ್ಲ ಎಂಬುದು ರಾಜ್ಯದಲ್ಲಿ ಉದ್ದಕ್ಕೂ ಕಂಡು ಬಂದಿದೆ. ಏಕೆಂದರೆ ಪಕ್ಷಗಳ ಪರವಾದ ಮತಬ್ಯಾಂಕ್ ರಾಜ್ಯದಲ್ಲಿ ಚದುರಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಮತಗಳಿಕೆ ಪ್ರಮಾಣ ಹೆಚ್ಚಾಗಿದ್ದರೂ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿತ್ತು.
ಪರಿಣಾಮಕಾರಿ ಆಡಳಿತಕ್ಕೂ ಸಿಕ್ಕಿಲ್ಲ: ಆಡಳಿತ ಪಕ್ಷದಲ್ಲಿ ಭಿನ್ನಮತ ಹೆಚ್ಚಾಗಿ ಮುಖ್ಯಮಂತ್ರಿಗಳ ಬದಲಾವಣೆ ಆಗಿರುವುದು ಒಂದೆಡೆಯಾದರೆ, ಪರಿಣಾಮಕಾರಿಯಾಗಿ ಆಡಳಿತ ಮಾಡಿದ ಪಕ್ಷ ಸಹ ಜನರ ಒಲವು ಮತ್ತೊಮ್ಮೆ ಗಳಿಸುವಲ್ಲಿ ವಿಫಲವಾಗಿರುವುದು ರಾಜ್ಯದ ವಿಶೇಷವಾಗಿದೆ. ರಾಜ್ಯದ ಮತದಾರರ ನಾಡಿಮಿಡಿತವನ್ನು ಹಿಡಿಯಲು ಸಾಧ್ಯವೇ ಇಲ್ಲವೆಂಬ ಸ್ಥಿತಿ ಇದೆ. ರಾಜ್ಯದ ಮತದಾರರನ್ನು ಸುಲಭವಾಗಿ ಅರ್ಥೈಸಲು ಸಾಧ್ಯವಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲವೇ ಇಲ್ಲವೆಂದು ಹೇಳುತ್ತಿದ್ದಾರೆ. ಆದರೆ ಬಿಜೆಪಿಯ ಆಡಳಿತ ಪರವಾದ ಹಾಗೂ ಪ್ರತಿಪಕ್ಷಗಳ ಆಡಳಿತ ವಿರೋಧವಾದ ವಾದವನ್ನು ಮತದಾರರು ಹೇಗೆ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಲೆಕ್ಕ ಹಾಕಲು ರಾಜಕೀಯ ಪಕ್ಷಗಳು ತಿಣುಕಾಡುತ್ತಿವೆ. ಮತದಾರರ ನಿರ್ಧಾರ ಯಾವಾಗಲೂ ಗುಪ್ತಗಾಮಿನಿಯೇ ಆಗಿರುತ್ತದೆ.