ಪಂಜಾಬ್: 40 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಸತತ ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ತಾವು ತೆಗೆದ ವಸ್ತುಗಳನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಘಟನೆ ಪಂಜಾಬ್‌ನ ಮೊಗಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಯುವ ಕೃಷಿಕರು ಭತ್ತದ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಲಿ
ವ್ಯಕ್ತಿಯ ಹೊಟ್ಟೆಯಿಂದ ಇಯರ್‌ಫೋನ್, ಬೋಲ್ಟ್, ನಟ್ಸ್, ವಾಷರ್, ಬೀಗ ಮತ್ತು ಕೀಗಳು ಸೇರಿದಂತೆ ಹಲವಾರು ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದಾರೆ. ಈ ಘಟನೆ ಇದೀಗ ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ.
ವರದಿಗಳ ಪ್ರಕಾರ, ವ್ಯಕ್ತಿ ಕಳೆದ ಎರಡು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಮೊಗದ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ತೀವ್ರ ಹೊಟ್ಟೆ ನೋವು, ಜ್ವರ ಮತ್ತು ವಾಂತಿಯೇ ಕಾರಣ ಎಂದು ವೈದ್ಯರ ಬಳಿ ದೂರಿದ್ದಾರೆ. ಎಕ್ಸ್-ರೇ ಸ್ಕ್ಯಾನ್ ಮಾಡಿದ ವೈದ್ಯರು ಆತನ ಹೊಟ್ಟೆಯಲ್ಲಿದ್ದ ಹಲವಾರು ವಸ್ತುಗಳನ್ನು ಕಂಡು ಶಾಕ್ ಆಗಿದ್ದು, ಸತತ ಮೂರು ಗಂಟೆಯ ಶಸ್ತ್ರಚಿಕಿತ್ಸೆ ನಂತರ ಅದನ್ನೆಲ್ಲಾ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಮೆಡಿಸಿಟಿ ನಿರ್ದೇಶಕ ಡಾ. ಅಜ್ಮೀರ್ ಕಲ್ರಾ, "ನನ್ನ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ. ಈ ವಸ್ತುಗಳು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿದ್ದ ಕಾರಣ, ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ. ವ್ಯಕ್ತಿಯ ಕುಟುಂಬದ ಸದಸ್ಯರು ಅನಾಮಧೇಯತೆಯನ್ನು ಕೋರಿದ್ದಾರೆ. ಹಾಗಾಗಿ ಹೆಚ್ಚು ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ" ಎಂದು ಹೇಳಿದರು.
ಈ ರೀತಿಯ ವಸ್ತುಗಳನ್ನು ಅವರು ಹೇಗೆ ಸೇವಿಸಿದರು ಎಂಬುದು ನಮಗೆ ತಿಳಿದಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಅಲ್ಲದೇ ತಮ್ಮ ಮಗನಿಗೆ ಮಾನಸಿಕವಾಗಿ ತೊಂದರೆಯಾಗಿದೆ ಎಂದು ಹೇಳಿರುವುದನ್ನು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).