ನ್ಯೂಸ್

ತನ್ನ ಕೂದಲನ್ನೇ ತಿನ್ನುತ್ತಿದ್ದ ಬಾಲಕಿ; ಹೊಟ್ಟೆಯಲ್ಲಿತ್ತು 100 ಗ್ರಾಂ ತೂಕದ ಕೂದಲು ಉಂಡೆ!

ಮುಂಬೈ: ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಗಳನ್ನು ಪೋಷಕರು ಕಳೆದ ಒಂದು ವರ್ಷದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಅನೇಕ ವೈದ್ಯರು ಅವಳನ್ನು ಗುಣಪಡಿಸಲು ವಿಫಲರಾದರು. ಆದರೆ ಇದೀಗ ಬಾಲಕಿ ಕುರಿತಾಗಿ ವೈದ್ಯರು ಕೊಟ್ಟಿರುವ ರಿಪೋರ್ಟ್​​ ನೋಡಿ ಹೆತ್ತವರು ಆಘಾತಕ್ಕೊಳಗಾದರು.

ಬಾಯಿ ಜೆರ್ಬೈ ವಾಡಿಯಾ ಆಸ್ಪತ್ರೆಯ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಹೊಟ್ಟೆಯಿಂದ 100 ಗ್ರಾಂ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ.  ಒಂದು ವರ್ಷದಿಂದ ಬಾಲಕಿ ತನ್ನ ಕೂದಲನ್ನು ತಿನ್ನುತ್ತಿದ್ದರೂ ಮನೆಯವರಿಗೆ ತಿಳಿದಿರಲಿಲ್ಲ. 9 ವರ್ಷ ವಯಸ್ಸಿನಲ್ಲೇ ಋತುಮತಿಯಾದ ಕಾರಣ ಬಾಲಕಿಯು ಪಿರಿಯಡ್‌ ಮೆಡಿಕಲ್‌ ತೆಗೆದುಕೊಳ್ಳುತ್ತಿದ್ದಳು ಎಂದು ತಿಳಿದುಬಂದಿದೆ.

'ನನ್ನ ಮಗಳಿಗೆ ಮಧ್ಯಂತರ ಹೊಟ್ಟೆ ನೋವು ಇತ್ತು. ಅದು ಕಾಲಾನಂತರದಲ್ಲಿ ಹದಗೆಟ್ಟಿತು. ಆಕೆಗೆ ಔಷಧಿ ನೀಡಿದರೂ ನೋವು ನಿಲ್ಲಲಿಲ್ಲ. ನಾವು ಅನೇಕ ವೈದ್ಯರನ್ನು ಸಂಪರ್ಕಿಸಿದ್ದೇವೆ. ಆದರೆ ,ಅವರು ಚಿಕಿತ್ಸೆ ನೀಡಲು ವಿಫಲರಾದರು. ನಮ್ಮ ಮಗಳ ಹೊಟ್ಟೆಯಲ್ಲಿ ಕೂದಲು ಇರುವ ಬಗ್ಗೆ ತಿಳಿದಾಗ ನಾವು ಆಘಾತಕ್ಕೆ ಒಳಗಾದೆವು 'ಎಂದು ಬಾಲಕಿಯ ತಾಯಿ ಹೇಳಿದ್ದಾರೆ.