ನ್ಯೂಸ್

ವೈದ್ಯನಾಗಿ ಪತ್ನಿ ಉಸಿರು ನಿಲ್ಲಿಸಿದ! ಪಾಪಿಯ ಕರಾಳ ಮುಖ ಕಳಚಿದ್ದು ಮೃತಳ ಸಹೋದರಿ, ಇಂಚಿಂಚೂ ಮಾಹಿತಿ ಬಯಲು | Murder

ಬೆಂಗಳೂರು: ಆರು ತಿಂಗಳ ಹಿಂದೆ ವೃತ್ತಿಯಲ್ಲಿ ವೈದ್ಯೆಯಾಗಿದ್ದ (Doctor Murder Case) ಪತ್ನಿಯನ್ನು ಪಾಪಿ ಪತಿ ಕೊಲೆಗೈದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ಡಾ. ಮಹೇಂದ್ರ ರೆಡ್ಡಿ ಜಿ.ಎಸ್​ನನ್ನು ಬೆಂಗಳೂರು ಪೊಲೀಸರು ಬಂಧಿಸಿ, ತನಿಖೆಗೆ ಒಳಪಡಿಸಿದ್ದಾರೆ. ಮೃತ ವೈದ್ಯೆಯನ್ನು ಡಾ. ಕೃತಿಕಾ ಎಂ. ರೆಡ್ಡಿ (29) ಎಂದು ಗುರುತಿಸಲಾಗಿದ್ದು, ಯುವತಿಯ ಕೊಲೆ ಆಗಿದ್ದಾದರೂ ಏಕೆ? ಕೊಲೆಗಾರನ ಅಸಲಿ ಮುಖವಾಡ ಬಿಚ್ಚಿಟ್ಟಿದ್ಯಾರು? ಎಂಬುದರ ಇಂಚಿಂಚೂ ಮಾಹಿತಿ ಇದೀಗ ಕಡೆಗೂ ಬಯಲಾಗಿದೆ.

ಗ್ಯಾಸ್ಟ್ರಿಕ್​, ಲೋ ಬಿಪಿ…

ವರದಿ ಪ್ರಕಾರ, ಆರು ತಿಂಗಳ ಹಿಂದೆ ಆಕೆಯದ್ದು ಸಹಜ ಸಾವು ಎಂದು ನಿರ್ಧರಿಸಿ, ಮಣ್ಣು ಮಾಡಲಾಗಿತ್ತು. ಆದರೆ, ಈಗ ಆಕೆಯನ್ನು ವೈದ್ಯ ಪತಿಯೇ ಕೊಲೆ ಮಾಡಿದ ಶಾಕಿಂಗ್ ಸತ್ಯ ಮೃತಳ ಸಹೋದರಿಯ ಅನುಮಾನಗಳಿಂದ ಹೊರಬಿದ್ದಿದೆ. ಕೃತಿಕಾಳ ಕುಟುಂಬಸ್ಥರ ಕಣ್ಣಿಗೆ ಮಣ್ಣೆರಚಿದ್ದ ಮಹೇಂದ್ರ, ಆಕೆ ವಿಪರೀತ ಗ್ಯಾಸ್ಟ್ರಿಕ್​, ಲೋ ಬಿಪಿ ಸಮಸ್ಯೆಗಳಿಂದ ಬಳಲುತ್ತಿದ್ದಳು. ಹಠಾತ್​ ಸಾವಿಗೀಡಾದಳು ಎಂದು ನಂಬಿಸಿ, ಮರಣೋತ್ತರ ಪರೀಕ್ಷೆಯ ಮಾತೇ ಬಾರದಂತೆ ಪತ್ನಿಯ ಹೆತ್ತವರ ದಿಕ್ಕನ್ನು ತಪ್ಪಿಸಿದ್ದ. ಆದ್ರೆ, ಮೃತಳ ಸಹೋದರಿ ಮಾತ್ರ ಇದನ್ನು ನಂಬಿರಲಿಲ್ಲ. ಬದಲಿಗೆ ಶಂಕಿಸಿದ್ದಳು. ಅದೇ ಇಂದು ಆತನ ಬಣ್ಣವನ್ನು ಬಯಲು ಮಾಡಿದೆ.

ಕೃತಿಕಾಳ ಸಹೋದರಿ ರೇಡಿಯಾಲಜಿಸ್ಟ್ ಡಾ. ನಿಕಿತಾ ಎಂ. ರೆಡ್ಡಿ ಆರೋಪಿಯ ಮಾತುಗಳ ಮೇಲೆ ಮೊದಲಿನಿಂದಲೂ ಶಂಕಿಸಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದಾದ ನಿಕಿತಾ, ಮಾರತ್ತಹಳ್ಳಿ ಪೊಲೀಸರಲ್ಲಿ ಮೆಡಿಕೊ ಲೀಗಲ್ ಕೇಸ್ (MLC) ದಾಖಲಿಸಿದರು. ಸಹೋದರಿಯ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ಭೇದಿಸುವಂತೆ ದೂರು ನೀಡಿದ್ದರು. ಇದರೊಟ್ಟಿಗೆ ಕೃತಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಹಾಗೂ ಎಫ್​ಎಸ್​ಎಲ್ ವರದಿಗೆ ಸ್ಯಾಂಪಲ್​ ಕಳುಹಿಸಿಕೊಡಿ ಎಂದು ಕೋರಿದ್ದರು. ಅಂತೆಯೇ, ಕೇಸ್​ ಬೆನ್ನತ್ತಿದ ಖಾಕಿಗೆ ಕೃತಿಕಾಳ ಸಾವು ಸಹಜವಲ್ಲ! ಅದು ಕೊಲೆ ಎಂಬುದು ಸ್ಪಷ್ಟವಾಯಿತು.

ಓವರ್​ ಡೋಸ್​ ಅರಿವಳಿಕೆ

ಆರೋಪಿ ಮಹೇಂದ್ರ, ‘ಪ್ರೊಪೋಫೋಲ್’ ಎಂಬ ಅರಿವಳಿಕೆ​ಯನ್ನು ಆಕೆಯ ಉಸಿರು ನಿಲ್ಲಿಸಲು ಬಳಿಸಿದ್ದಾರೆಂದು ಪೊಲೀಸರು ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ. ಇದು ಉಸಿರಾಟದ ವೈಫಲ್ಯ ಮತ್ತು ಸಾವಿಗೆ ಕಾರಣವಾಗಿದೆ ಎಂದು ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ (FSL) ವರದಿಗಳು ಸೂಚಿಸಿವೆ.

ಏನಿದು ಪ್ರಕರಣ?

ಈ ವರ್ಷದ ಏಪ್ರಿಲ್​ 24ರಂದು ಚರ್ಮರೋಗ ತಜ್ಞೆ ಡಾ. ಕೃತಿಕಾ ಮೃತಟ್ಟಿದ್ದಾಗಿ ವರದಿಯಾಗಿತ್ತು. ಬೆಂಗಳೂರಿನ ಮಾರತಹಳ್ಳಿಯ ಮುನ್ನೇಕೊಳಲದಲ್ಲಿರುವ ತಮ್ಮ ಮನೆಯಲ್ಲಿ ವೈದ್ಯೆ ಶವ ಪತ್ತೆಯಾಯಿತು. ಈ ವೇಳೆ ಹೆಂಡತಿಗೆ ಜೀರ್ಣಕಾರಿ ಮತ್ತು ಲೋ ಬಿಪಿ ಸಮಸ್ಯೆಗಳಿತ್ತು. ತೀರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಿಸದೆ ಸಾವಿಗೀಡಾದಳು ಎಂದು ಆರೋಪಿ ಮಹೇಂದ್ರ ಆರಂಭದಲ್ಲಿ ಪತ್ನಿಯ ಕುಟುಂಬಸ್ಥರಿಗೆ ಮನವರಿಕೆ ಮಾಡಿದ್ದ ಎಂದು ವರದಿಯಾಗಿದೆ,(ಏಜೆನ್ಸೀಸ್).