ನ್ಯೂಸ್

ರೈಲು ಪ್ರಯಾಣದ ಮಧ್ಯೆಯೇ ಹೆರಿಗೆ ನೋವು: ದೇವರಂತೆ ಬಂದ ಯುವಕ, ಉಳಿದಿದ್ದು ಎರಡು ಜೀವ! Railway platform

ಮುಂಬೈ: ವಿಡಿಯೋ ಕಾಲ್​ನಲ್ಲಿ ವೈದ್ಯರ ಸಲಹೆ ಪಡೆದು ಯುವ ಪ್ರಯಾಣಿಕನೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ( Railway platform ) ಗರ್ಭಿಣಿಯೊಬ್ಬರಿಗೆ ಯಶಸ್ವಿ ಹೆರಿಗೆ ಮಾಡಿಸಿರುವ ಅಪರೂಪದ ಘಟನೆ ತಡರಾತ್ರಿ (ಅ.16) 1 ಗಂಟೆ ಸುಮಾರಿಗೆ ಮುಂಬೈನ ರಾಮ ಮಂದಿರ ನಿಲ್ದಾಣದಲ್ಲಿ ನಡೆದಿದೆ.

ಪ್ರತ್ಯಕ್ಷದರ್ಶಿ ಮಂಜೀತ್ ಧಿಲ್ಲೋನ್ ಎಂಬುವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಕಾಸ್​ ಬೇಂದ್ರೆ ಎಂಬ ಯುವಕನ ಧೈರ್ಯಶಾಲಿ ನಡೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ವ್ಯಕ್ತಿ ನಿಜಕ್ಕೂ ಧೈರ್ಯಶಾಲಿ, ಈತನನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ. ಈ ಯುವಕ ರಾಮಮಂದಿರ ನಿಲ್ದಾಣದಲ್ಲಿ ರಾತ್ರಿ 1 ಗಂಟೆ ಸುಮಾರಿಗೆ ಸರಪಳಿ ಎಳೆದು ರೈಲು ನಿಲ್ಲಿಸಿದಾಗ ಎಲವೂ ಪ್ರಾರಂಭವಾಯಿತು. ನಾನು ಈ ವಿಚಾರದ ಬಗ್ಗೆ ಹೇಳುವಾಗ ನಿಜಕ್ಕೂ ಭಾವುಕನಾಗುತ್ತಿದ್ದೇನೆ. ಆ ಗರ್ಭಿಣಿಯ ಮಗು ಅರ್ಧ ಹೊರಗೆ ಮತ್ತು ಅರ್ಧ ಒಳಗೆ ಇತ್ತು. ಆ ಕ್ಷಣದಲ್ಲಿ, ದೇವರು ಈ ಸಹೋದರನನ್ನು ಒಂದು ಕಾರಣಕ್ಕಾಗಿ ಅಲ್ಲಿಗೆ ಕಳುಹಿಸಿದನೆಂದು ನನಗೆ ಅನಿಸುತ್ತದೆ ಅಂತ ಧಿಲ್ಲೋನ್​ ಬರೆದುಕೊಂಡಿದ್ದಾರೆ.

ಈ ವೇಳೆ ನಾವೆಲ್ಲರೂ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಿದೆವು. ನಾವು ಹಲವಾರು ವೈದ್ಯರಿಗೆ ಕರೆ ಮಾಡಿದೆವು. ಆದರೆ, ಆಂಬ್ಯುಲೆನ್ಸ್ ತಡವಾಗುತ್ತದೆ ಎಂದು ಅವರೆಲ್ಲ ಹೇಳಿದರು. ಕೊನೆಗೆ, ಓರ್ವ ಮಹಿಳಾ ವೈದ್ಯರು ವಿಡಿಯೋ ಕರೆಯ ಮೂಲಕ ಯುವಕನಿಗೆ ಸೂಚನೆಗಳನ್ನು ನೀಡಿದರು. ಆತ ಆ ಎಲ್ಲ ಸೂಚನೆಗಳನ್ನು ನಿಖರವಾಗಿ ಪಾಲಿಸಿದನು. ಆ ಕ್ಷಣದಲ್ಲಿ ಆತ ತೋರಿಸಿದ ಧೈರ್ಯ ಪದಗಳಿನ್ನು ಮೀರಿದ್ದು ಎಂದು ಧಿಲ್ಲೋನ್​ ಬಣ್ಣಿಸಿದ್ದಾರೆ.

ಇದಕ್ಕೂ ಮೊದಲು, ಗರ್ಭಿಣಿಯ ಕುಟುಂಬವು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿತ್ತು. ಆದರೆ, ಆಸ್ಪತ್ರೆ ಅಧಿಕಾರಿಗಳು ಅಲ್ಲಿ ಹೆರಿಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಾಪಸ್​ ಕಳುಹಿಸಿದ್ದಾರೆ. ಆದ್ದರಿಂದ, ಬೇರೆ ದಾರಿಯಿಲ್ಲದೇ ಆಕೆಯನ್ನು ರೈಲಿನ ಮೂಲಕ ವಾಪಸ್​ ಕರೆದುಕೊಂಡು ಬರಬೇಕಾಯಿತು. ಇದೇ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿತು. ಇಂತಹ ಪರಿಸ್ಥಿತಿಯಲ್ಲಿ ಆಸ್ಪತ್ರೆಯು, ಗರ್ಭಿಣಿಗೆ ಸಹಾಯ ಮಾಡಲು ನಿರಾಕರಿಸಿದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಧಿಲ್ಲೋನ್​ ಅವರು ಕಿಡಿಕಾರಿದ್ದಾರೆ.

ಆ ರಾತ್ರಿ, ಆ ಯುವಕ ಎರಡು ಜೀವಗಳನ್ನು ಉಳಿಸಿದ. ಇದರ ನಡುವೆ ಅನೇಕ ಜನರು ಅಲ್ಲಿಯೇ ನಿಂತು ಸುಮ್ಮನೇ ಹೊರಟುಹೋದರು. ನೀವು ಎಂದಾದರೂ ಯಾರಿಗಾದರೂ ಸಹಾಯ ಮಾಡುವ ಅವಕಾಶ ಸಿಕ್ಕರೆ, ಅದನ್ನು ದೇವರ ಸಂಕೇತವೆಂದು ಪರಿಗಣಿಸಿ ಅದನ್ನು ಮಾಡಿ, ನನ್ನ ಸ್ನೇಹಿತರೇ. ಆ ಯುವಕ ತಾಯಿ ಮತ್ತು ಆಕೆಯ ಮಗುವಿನ ಜೀವಗಳನ್ನು ಉಳಿಸಿದನು. ಇದಾದ ಬಳಿಕ ಒಟ್ಟಿಗೆ, ನಾವು ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ನನಗಾಗುತ್ತಿರುವ ಅನುಭವಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಧಿಲ್ಲೋನ್​ ಹೇಳಿದ್ದಾರೆ. (ಏಜೆನ್ಸೀಸ್​)