ನ್ಯೂಸ್

ನಿಮಗೆ ಬಿಜೆಪಿ ಟಿಕೆಟ್ ಬೇಕಾಗಿದೆಯಾ? ಲಹರಿ ವೇಲು ವಿರುದ್ಧ ರಮ್ಯಾ ಕಿಡಿ

ಬೆಂಗಳೂರು: ಹಲವಾರು ವರ್ಷಗಳ ಕಾಲ ನೇಪಥ್ಯಕ್ಕೆ ಸರಿದು ಈಗಷ್ಟೇ ಮತ್ತೆ ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಸಕ್ರಿಯವಾಗಿರುವ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ.

ಇದೀಗ ಚಿತ್ರರಂಗದ ಜತೆ ಹಲವಾರು ದಶಕಗಳಿಂದ ನಂಟು ಹೊಂದಿರುವ ಲಹರಿ ಸಂಸ್ಥೆ ಮುಖ್ಯಸ್ಥ ವೇಲು ಅವರ ವಿರುದ್ಧ ಕಿಡಿಕಾಡಿದ್ದಾರೆ ರಮ್ಯಾ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಲಹರಿ ವೇಲು ವಿರುದ್ಧ ರಮ್ಯಾ ಸಿಟ್ಟಾಗಿದ್ದಾರೆ.

ಯಾತ್ರೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಹಾಡನ್ನು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಳಸಿತ್ತು. ಅದರ ವಿರುದ್ಧ ಲಹರಿ ವೇಲು, ಹಕ್ಕು ಸ್ವಾಮ್ಯ ಕಾಯ್ದೆ (ಕಾಪಿ ರೈಟ್) ಉಲ್ಲಂಘನೆ ದೂರು ದಾಖಲಿಸಿದ್ದರು. ಈ ವಿಷಯ ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದಾಗಿ ಕಾಂಗ್ರೆಸ್ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ಬ್ಲಾಕ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಸಂಸದೆ ರಮ್ಯಾ, ಲಹರಿ ಆಡಿಯೋ ಕಂಪನಿ ಮುಖ್ಯಸ್ಥ ಲಹರಿ ವೇಲು ವಿರುದ್ಧ ಕಿಡಿಕಾರಿದ್ದಾರೆ.

"ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು. ಅದಕ್ಕಾಗಿ ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡ್ತಿರೋದು ಬೇಸರದ ಸಂಗತಿ" ಅಂತ ಟ್ಟಿಟರ್‌ನಲ್ಲಿ ರಮ್ಯಾ ಕಿಡಿ ಕಾಡಿದ್ದಾರೆ.