ನ್ಯೂಸ್

ಶಾಲಾ ಬಸ್​ಗಳ ಬಣ್ಣ ಹಳದಿಯೇ ಏಕೆ? ಇದರ ಹಿಂದಿದೆ ನಿಮಗೆ ಗೊತ್ತಿರದ ಒಂದು ರೋಚಕ ಸಂಗತಿ! School Bus

School Bus: ಸಾಮಾನ್ಯವಾಗಿ ಶಾಲಾ ಬಸ್​ಗಳ ಬಣ್ಣ ಹಳದಿಯಲ್ಲಿರುತ್ತವೆ. ಇದು ನಮಗೂ, ನಿಮಗೂ ಗೊತ್ತಿರುವ ವಿಷಯವೇ. ಆದರೆ, ಹಳದಿ ಬಣ್ಣವೇ ಏಕೆ ಅಂತ ಎಂದಾದರೂ ಯೋಚಿಸಿದ್ದೀರಾ? ಖಂಡಿತ ಇಲ್ಲ ಬಿಡಿ. ಕಾರಣ, ನಾವು ದಿನನಿತ್ಯ ಏನೆಲ್ಲ ಕೆಲಸಗಳನ್ನು ಮಾಡಿ ಮುಗಿಸಬೇಕು ಎಂದು ಪಟ್ಟಿ ಮಾಡಿಕೊಂಡಿರುತ್ತೇವೋ, ಅದರಲ್ಲೇ ಹಲವನ್ನು ಮರೆತು ಮನೆಗೆ ಹಿಂತಿರುಗಿರುತ್ತೇವೆ. ಹೀಗಿದ್ದಮೇಲೆ ಬಸ್​ನ ಬಣ್ಣದ ಬಗ್ಗೆ ಯೋಚಿಸಲು ಸಮಯ ಇದೆಯೇ? ಇಲ್ಲ ಎಂದೇ ಭಾವಿಸೋಣ.

ರಸ್ತೆಯಲ್ಲಿ ವಿವಿಧ ಬಣ್ಣಗಳ ವಾಹನಗಳನ್ನು ನಾವು ದಿನನತ್ಯ ನೋಡುತ್ತಿರುತ್ತೇವೆ. ಆದರೆ, ಈ ಪೈಕಿ ಹಳದಿ ಬಣ್ಣದ ಶಾಲಾ ವಾಹನಗಳು ಬಹುಬೇಗನೇ ನಮ್ಮ ಕಣ್ಣಿಗೆ ಬೀಳುತ್ತವೆ. ಇದನ್ನು ಖಂಡಿತ ನೀವು ಗಮನಿಸಿರುತ್ತೀರಿ! ಹಲವು ಬಣ್ಣಗಳ ವಾಹನಗಳ ಮಧ್ಯೆ ಹಳದಿ ಬಣ್ಣದ ಶಾಲಾ ಬಸ್‌ಗಳು ಬಹಳ ಸುಲಭವಾಗಿ ನಮಗೆ ಕಾಣಸಿಗುತ್ತವೆ. ಇದೇ ಉದ್ದೇಶದಿಂದಲೇ ಇಂದು ಅದಕ್ಕೆ ಯೆಲ್ಲೋ ಕಲರ್​ ನೀಡಲಾಗಿದೆ.

ಅಸಲಿಗೆ ಈ ಬಣ್ಣ ನಿರ್ಧಾರವಾಗಿದ್ದು ಅಮೆರಿಕದಲ್ಲಿ. 1930ರ ದಶಕದಲ್ಲಿ, ಕೊಲಂಬಿಯಾ ವಿಶ್ವವಿದ್ಯಾಲಯದ ಶಿಕ್ಷಕರ ಕಾಲೇಜಿನ ಪ್ರಾಧ್ಯಾಪಕರಾದ ಫ್ರಾಂಕ್ ಸಿರ್ ಎಂಬುವವರು, ದೇಶದಲ್ಲಿ ಶಾಲಾ ವಾಹನಗಳ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದ ಇವರು, ಅಲ್ಲಿಯವರೆಗೆ, ಶಾಲಾ ವಾಹನಗಳ ವಿನ್ಯಾಸವನ್ನು ನಿರ್ಧರಿಸಲು ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿರಲಿಲ್ಲ.

ನಂತರ ಅವರು, ಅಮೇರಿಕನ್ ಶಾಲಾ ಮಕ್ಕಳ ಸುರಕ್ಷತೆಗಾಗಿ ವಿಶೇಷ ಸಭೆಯನ್ನು ಆಯೋಜಿಸಿದರು. ಇದರಲ್ಲಿ ದೇಶದ ಪ್ರಮುಖ ಶಿಕ್ಷಕರು, ಸಾರಿಗೆ ಅಧಿಕಾರಿಗಳು, ಬಸ್ ತಯಾರಕರು ಮತ್ತು ಇತರರು ಭಾಗವಹಿಸಿದ್ದರು. ಈ ವೇಳೆ ಬಸ್‌ನ ಬಣ್ಣವನ್ನು ಆಯ್ಕೆ ಮಾಡಲು ಚರ್ಚಿಸಲಾಯಿತು. ಸಭೆಯಲ್ಲಿ ಗೋಡೆಗಳ ಮೇಲೆ ಒಂದಷ್ಟು ಬಣ್ಣಗಳನ್ನು ಬಳೆದು, ಅವುಗಳಲ್ಲಿ ನಿಮಗೆ ಯಾವ ಬಣ್ಣ ಸೂಕ್ತ ಎಂಬುದನ್ನು ಆಯ್ಕೆ ಮಾಡಿ ಎಂದು ತಿಳಿಸಲಾಯಿತು. ಒಂದಷ್ಟು ಮಂದಿ ಹಳದಿ ಎಂದರೆ, ಇನ್ನೊಂದಷ್ಟು ಜನ ಕೇಸರಿ ಎಂದರು.

ಅಂತಿಮವಾಗಿ, ಹಳದಿ ಬಣ್ಣಕ್ಕೆ ಹೆಚ್ಚು ಮತ ಸಿಕ್ಕ ಬಳಿಕ ಅಂದಿನಿಂದ ಶಾಲಾ ಬಸ್‌ಗಳಿಗೆ ಇದೇ ಕಲರ್​ ಅನ್ನು ಬಳಸಲಾಯಿತು. ವಿಜ್ಞಾನಿಗಳ ಪ್ರಕಾರ, ಹಳದಿ ಬಣ್ಣ ಮನುಷ್ಯರಿಗೆ ನೋಡಲು ಸುಲಭ. ಇದು ಸಾಧ್ಯವಾದಷ್ಟು ಹೆಚ್ಚಿನ ಗೋಚರತೆಯನ್ನು ಹೊಂದಿದೆ. ಮಾನವನ ಕಣ್ಣುಗಳಲ್ಲಿ ಕೋನ್-ಆಕಾರದ ದ್ಯುತಿಗ್ರಾಹಕ ಕೋಶಗಳ ಉಪಸ್ಥಿತಿಯಿಂದಾಗಿ ಇದು ಸಾಧ್ಯವಾಗಿದೆ. ಮಾನವನ ಕಣ್ಣುಗಳು ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳನ್ನು ಪ್ರತ್ಯೇಕಿಸುವ ಮೂರು ವಿಧದ ಶಂಕುಗಳನ್ನು ಹೊಂದಿರುತ್ತವೆ. ಹಳದಿ ಬೆಳಕು ಕೆಂಪು ಮತ್ತು ಹಸಿರು ಎರಡೂ ಜೀವಕೋಶಗಳ ಮೇಲೆ ಏಕಕಾಲದಲ್ಲಿ ಪರಿಣಾಮ ಬೀರುವುದರಿಂದ ಯೆಲ್ಲೋ ಬಹಳ ಸುಲಭವಾಗಿ ಇತರೆ ಬಣ್ಣಗಳನ್ನು ಮೀರಿಸಿ ಕಾಣಿಸುತ್ತದೆ,(ಏಜೆನ್ಸೀಸ್).