ಭಾರತದ ಮೊದಲ ಸೂರ್ಯೋದಯ ಸ್ಥಳ ಡೊಂಗ್ ಕಣಿವೆ  
ನ್ಯೂಸ್

ಭಾರತದಲ್ಲಿ ಮೊದಲು ಸೂರ್ಯ ಹುಟ್ಟೋದು ಎಲ್ಲಿ ಗೊತ್ತಾ? ಬೆಳಗಿನ ಜಾವ 4 ಗಂಟೆಗೇ ಬೆಳಗಾಗೋ ಊರಿದು! | India's First Sunrise

India's First Sunrise: ಭಾರತದಲ್ಲಿ ಮೊದಲು ಸೂರ್ಯ ಎಲ್ಲಿ ಹುಟ್ಟುತ್ತಾನೆ ಅಂತ ಕೇಳಿದ್ರೆ, ಬಹುತೇಕರು ಉತ್ತರ ದಿಕ್ಕಿನ ಕಡೆ ಕೈ ತೋರಿಸಬಹುದು. ಆದ್ರೆ ನಿಜವಾಗಿಯೂ ಸೂರ್ಯ ಮೊದಲು ಕಾಣಿಸೋದು ಪೂರ್ವ ದಿಕ್ಕಿನಲ್ಲಿ. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿರುವ ಡೊಂಗ್ ಕಣಿವೆಯಲ್ಲೇ ಪ್ರತಿದಿನ ಭಾರತದ ಮೊದಲ ಸೂರ್ಯೋದಯವಾಗುತ್ತೆ.

ಡೊಂಗ್ ಕಣಿವೆಯು ಭಾರತದ ಸುವರ್ಣಭೂಮಿಯ ಪೂರ್ವ ತುದಿಯಲ್ಲಿದೆ, ಅದರ ಶಾಂತವಾದ ಗೊಂಡೇಲುಗಳಲ್ಲಿ ಅಡಗಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇಲ್ಲಿ, ಮುಂಜಾನೆಯ ನಸುಕಿನ ಹೊತ್ತಿನಲ್ಲಿ ಸೂರ್ಯನ ಮೊದಲ ಕಿರಣಗಳು ನೆಲಕ್ಕೆ ಮುತ್ತಿಕ್ಕುವಾಗ, ಕಣಿವೆ ಹೊಳೆಯುತ್ತದೆ.

ಮೊದಲ ಸೂರ್ಯೋದಯದ ಅದ್ಭುತ ದೃಶ್ಯ

ಈ ಮನಮೋಹಕ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಮಧ್ಯರಾತ್ರಿಯೇ ಎದ್ದು ಬೆಟ್ಟದ ತುದಿಗೆ ಚಾರಣ ಮಾಡುತ್ತಾರೆ. ಬೆಳಗಿನ ಚಿನ್ನದ ಕಿರಣಗಳು ಕಣಿವೆಗಳು ಮತ್ತು ಹಿಮಾವೃತ ಪರ್ವತಗಳ ಮೇಲೆ ಹರಡಿಕೊಳ್ಳುವ ದೃಶ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿ ಸೂರ್ಯೋದಯ ಸಾಮಾನ್ಯವಾಗಿ ಬೆಳಗಿನ 4ರಿಂದ 4.30ರ ನಡುವೆ ಸಂಭವಿಸುತ್ತದೆ.

ಡೊಂಗ್ ಕಣಿವೆಯ ಇತಿಹಾಸ

1999ರಲ್ಲಿ ಭಾರತದ ಮೊದಲ ಸೂರ್ಯೋದಯ ಕಾಣಿಸುವ ಸ್ಥಳವೆಂದು ಗುರುತಿಸಲ್ಪಟ್ಟ ಬಳಿಕ ಡೊಂಗ್ ಕಣಿವೆ ಪ್ರವಾಸಿಗರ ಗಮನ ಸೆಳೆಯಿತು. 2000ರ ಜನವರಿ 1ರಂದು ಹೊಸ ಶತಮಾನದ ಮೊದಲ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದರು. ಇಲ್ಲಿಗೆ ತಲುಪುವ ಪ್ರಯಾಣ ಸ್ವಲ್ಪ ಕಠಿಣವಾಗಿದ್ದರೂ, ಸೂರ್ಯೋದಯದ ವೇಳೆ ಕಾಣಸಿಗುವ ಪ್ರಕೃತಿಯ ಅದ್ಭುತ ಸೌಂದರ್ಯ ಪ್ರವಾಸಿಗರ ಆಯಾಸವನ್ನೆಲ್ಲ ಮರೆಸುತ್ತದೆ..

ಡೊಂಗ್ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳು

  • ವಾಲೆಂಗ್: ಐತಿಹಾಸಿಕ ಮಹತ್ವ ಹೊಂದಿರುವ ಈ ಗ್ರಾಮದಲ್ಲಿ 1962ರ ಭಾರತ-ಚೀನಾ ಯುದ್ಧಕ್ಕೆ ಸಂಬಂಧಿಸಿದ ಸ್ಮಾರಕಗಳನ್ನು ವೀಕ್ಷಿಸಬಹುದು.

  • ಕಿಬಿತು: ಭಾರತದ ಪೂರ್ವದ ಗಡಿಯಲ್ಲಿರುವ ಈ ಗ್ರಾಮದಲ್ಲಿ ಗಡಿಭಾಗದ ಜನರ ಜೀವನಶೈಲಿ ಹಾಗೂ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

  • ಲೋಹಿತ್ ನದಿ: ಚಳಿಗಾಲದಲ್ಲಿ ಪೈನ್ ಮರಗಳ ಕಾಡಿನ ನಡುವೆ ಹರಿಯುವ ಲೋಹಿತ್ ನದಿಯ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

  • ಮೆಯೋರ್ ಬುಡಕಟ್ಟು ಜನಾಂಗ: ಈ ಭಾಗದ ಮೆಯೋರ್ ಸಮುದಾಯದ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಹತ್ತಿರದಿಂದ ತಿಳಿದುಕೊಳ್ಳಬಹುದು.

ಸೂರ್ಯೋದಯ ಉತ್ಸವ

ಡೊಂಗ್ ಕಣಿವೆಯ ವಿಶೇಷ ಸೂರ್ಯೋದಯದ ಮಹತ್ವವನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಅರುಣಾಚಲ ಪ್ರದೇಶ ಸರ್ಕಾರವು ಪ್ರತಿವರ್ಷ ಡಿಸೆಂಬರ್ 29ರಿಂದ ಜನವರಿ 1ರವರೆಗೆ ಸೂರ್ಯೋದಯ ಉತ್ಸವವನ್ನು ಆಯೋಜಿಸುತ್ತದೆ.

ಇದನ್ನೂ ಓದಿ: ಪರಿಚಯವೇ ಇಲ್ಲದವರನ್ನ ನೋಡಿ ಮುಖ ಸಿಂಡರಿಸೋದ್ಯಾಕೆ? ಇದು ನಿಮ್ಮ ತಪ್ಪಲ್ಲ, ಮನಸಿನ ಗ್ರಹಗತಿ! | Psychology

ಈ ಉತ್ಸವದಲ್ಲಿ ವಿಶೇಷ ಸೂರ್ಯೋದಯ ಪ್ರವಾಸ, ಸ್ಥಳೀಯ ಬುಡಕಟ್ಟು ನೃತ್ಯಗಳು, ಸಾಂಪ್ರದಾಯಿಕ ಆಹಾರ ಮೇಳ ಹಾಗೂ ಸ್ಥಳೀಯ ಕರಕುಶಲ ವಸ್ತುಗಳ ಪ್ರದರ್ಶನ ಪ್ರಮುಖ ಆಕರ್ಷಣೆಗಳಾಗಿವೆ.