ಬೆಂಗಳೂರು: ಕೆಲವೇ ದಿನಗಳಲ್ಲಿ 8, 9 ಮತ್ತು 10ನೇ ತರಗತಿಯ ಸೇತುಬಂಧ ವಿಡಿಯೋ ತರಗತಿಗಳು ಚಂದನ ವಾಹಿನಿಯಲ್ಲಿ ಆರಂಭಗೊಳ್ಳಲಿವೆ. ಆ ನಂತರ ಇಂಗ್ಲಿಷ್ ಮಾಧ್ಯಮಗಳಲ್ಲೂ ಈ ತರಗತಿಗಳ ಪಾಠ ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ-ಡಿಎಸ್ಇಆರ್ಟಿಯಲ್ಲಿ ಸೇತುಬಂಧ ಕಾರ್ಯಕ್ರಮದ ರೂಪುರೇಷೆ ಮತ್ತು ಸಿದ್ಧತೆಯನ್ನು ಬುಧವಾರ ಪರಿಶೀಲಿಸಿ ಸಚಿವರು ಮಾತನಾಡಿದರು. ಶಿಕ್ಷಣ ಇಲಾಖೆಯಿಂದಲೇ ಒಂದು ಪ್ರತ್ಯೇಕ ಚಾನಲ್ ಪ್ರಾರಂಭಕ್ಕೂ ಪ್ರಯತ್ನಗಳು ನಡೆದಿವೆ. ರಾಜ್ಯದ ಆಯ್ದ ಸ್ಥಳಗಳಲ್ಲಿ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹೊಸ ಸ್ಟುಡಿಯೋಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳೂ ಪ್ರಾರಂಭವಾಗಲಿವೆ ಎಂದು ತಿಳಿಸಿದರು. ಇದನ್ನೂ ಓದಿರಿ ವೈದ್ಯೆಗೆ ಒಂದೂವರೆ ವರ್ಷ ಜೈಲು!
ಕರೊನಾ ಆತಂಕದ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಸೇತುಬಂಧ’ (ಬ್ರಿಡ್ಜ್ ಕೋರ್ಸ್) ಕಾರ್ಯಕ್ರಮಗಳ ವಿಡಿಯೋ ತರಗತಿಗಳನ್ನು ದೂರದರ್ಶನ 'ಚಂದನ' ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಈ ಸಂಬಂಧ ಅಗತ್ಯ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸುರೇಶ್ಕುಮಾರ್ ಹೇಳಿದರು.
ಒಂದು ತರಗತಿಯಿಂದ ಮತ್ತೊಂದು ತರಗತಿಗೆ ತೇರ್ಗಡೆ ಹೊಂದುವ ಮಕ್ಕಳಿಗೆ ಹಿಂದಿನ ತರಗತಿಗಳ ಕಲಿಕೆಯನ್ನು ನೆನಪಿಸಿ ಮುಂದಿನ ತರಗತಿಗಳಿಗೆ ಸಿದ್ಧಗೊಳಿಸುವ ‘ಸೇತುಬಂಧ’ ಮಕ್ಕಳ ಕಲಿಕೆಯನ್ನು ಸಮಗ್ರವಾಗಿಸುವ ನಿಟ್ಟಿನಲ್ಲಿ ಇದೊಂದು ಪರಿಪೂರ್ಣ ಕಾರ್ಯಕ್ರಮ ಎಂದು ಸಚಿವರು ತಿಳಿಸಿದರು.