Intelligent Animals : ಮನುಷ್ಯನು ಈ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ಎನ್ನುವುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಮನುಷ್ಯ ಬುದ್ಧಿವಂತನಾಗಿರುವುದರಿಂದಲೇ ಆತ ಕಾಡಿನಿಂದ ಹೊರಬಂದು, ಮನೆಯನ್ನು ಕಟ್ಟಿಕೊಂಡು, ಮಾತನಾಡಲು, ಅಡುಗೆ ಮಾಡಲು ಮತ್ತು ನಾಗರಿಕ ಜಗತ್ತಿನಲ್ಲಿ ಬದುಕುವುದನ್ನು ಕಲಿತನು. ದಿನಗಳು ಕಳೆದಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ, ಜೀವನ ಶೈಲಿಯಲ್ಲಿ ಬದಲಾವಣೆ ಮಾಡುತ್ತಾ ಭೂಮಿಯ ಚಿತ್ರಣವನ್ನೇ ಬದಲಿಸಿದ್ದಾನೆ. ಹೀಗಾಗಿ ಮನುಷ್ಯನನ್ನು ಭೂಮಿಯ ಮೇಲಿನ ಅತಿ ಬುದ್ಧಿವಂತ ಜೀವಿ ಎಂದು ಕರೆಯಲಾಗುತ್ತದೆ.
ಒಂದು ವೇಳೆ ಮನುಷ್ಯ ಬುದ್ಧಿವಂತನಲ್ಲದಿದ್ದರೆ, ಅವನು ಇನ್ನೂ ಕಾಡಿನಲ್ಲಿಯೇ ವಾಸ ಮಾಡುತ್ತಿದ್ದ. ಅಂದಹಾಗೆ ಈ ಭೂಮಿಯ ಮೇಲೆ ಮನುಷ್ಯನಷ್ಟೇ ಬುದ್ಧಿಯನ್ನು ಹೊಂದಿರುವ ಕೆಲವು ಪ್ರಾಣಿಗಳಿವೆ. ಆ ಪ್ರಾಣಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಡಾಲ್ಫಿನ್‌ಗಳು ಸಮುದ್ರ ಜೀವಿಗಳು. ಇವು ನೋಡಲು ತುಂಬಾ ಆಕರ್ಷಕವಾಗಿವೆ. ಅಲ್ಲದೆ, ಮನುಷ್ಯನಷ್ಟೇ ತುಂಬಾ ಬುದ್ಧಿವಂತ ಪ್ರಾಣಿಗಳಿವು. ಪರಸ್ಪರ ಸಂವಹನ ನಡೆಸಬಲ್ಲವು. ಡಾಲ್ಫಿನ್‌ಗಳು ಶಿಳ್ಳೆಗಳ ಮೂಲಕ ಸಂವಹನ ನಡೆಸುತ್ತವೆ. ಇತರರನ್ನು ಅನುಕರಿಸುವಲ್ಲಿಯೂ ಇವು ಅತ್ಯುತ್ತಮವಾಗಿವೆ. ಅಲ್ಲದೆ, ಈ ಡಾಲ್ಫಿನ್ಗಳಲ್ಲಿ ಹೆಚ್ಚಿನ ಕಲಿಕಾ ಸಾಮರ್ಥ್ಯವನ್ನು ಹೊಂದಿದೆ.
ಭೂಮಿಯ ಮೇಲೆ ಚಿಂಪಾಂಜಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಈ ಚಿಂಪಾಜಿಗಳು ಕೂಡ ಮನಷ್ಯನಷ್ಟೇ ಬಹಳ ಬುದ್ಧಿವಂತ ಪ್ರಾಣಿಗಳಾಗಿವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇವು ಮುಂಚೂಣಿಯಲ್ಲಿವೆ. ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಸಾಮರ್ಥ್ಯ ಈ ಚಿಂಪಾಜಿಗಳಿಗೆ ಇದೆ.
ಒರಾಂಗುಟಾನ್ ಕೂಡ ಕೋತಿ ಜಾತಿಗೆ ಸೇರಿದ ಪ್ರಾಣಿಗಳಾಗಿದ್ದು, ಇವು ಕೂಡ ತುಂಬಾ ಬುದ್ಧಿವಂತ ಪ್ರಾಣಿಗಳು. ಇವು ಕಾಡಿನಲ್ಲಿ ಆಯುಧಗಳನ್ನು ಬಳಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ಮಕ್ಕಳು ಸಹ ಕಾಡಿನಲ್ಲಿ ಆಯುಧಗಳನ್ನು ಬಳಸುವುದನ್ನು ಕಾಣಬಹುದು ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಇವು ಕೂಡ ಪರಸ್ಪರ ಸಂವಹನ ನಡೆಸುವ ಸಾಮರ್ಥ್ಯವನ್ನು ಹೊಂದಿವೆ.
ಆನೆಗಳು ತಮ್ಮ ದೊಡ್ಡ ದೇಹಕ್ಕೆ ಹೆಸರುವಾಸಿಯಾಗಿವೆ. ಆನೆಗಳು ಬಹಳ ಒಳ್ಳೆಯ ಸ್ಮರಣಶಕ್ತಿಯನ್ನು ಹೊಂದಿರುತ್ತವೆ. ಆನೆಗಳು ತಮ್ಮ ಮೂತ್ರದ ವಾಸನೆಯಿಂದ ತಮ್ಮ ಸಂಬಂಧಿಕರನ್ನು ಗುರುತಿಸಬಲ್ಲವು.
ಕಾಗೆಗಳು ಭಾವುಕ ಜೀವಿಗಳು. ಇವುಗಳಿಗೆ ಬಹಳಷ್ಟು ಭಾವನೆಗಳಿರುತ್ತವೆ. ಅದಕ್ಕಾಗಿಯೇ ಕಾಗೆ ಬೀದಿಯಲ್ಲಿ ಸತ್ತರೆ ಅವು ಕೂಗಿ ಅಳುತ್ತವೆ. ಕಾಗೆಗಳು ಇತರರ ಮುಖಗಳನ್ನು ಅನೇಕ ದಿನಗಳವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.