ನೆಮ್ಮದಿಗೆ ಕೊಳ್ಳಿ ಇಟ್ಟು, ಇಡೀ ಜಗತ್ತನ್ನು ಕಂಗೆಡಿಸಿರುವ ಕರೊನಾ ಬಗ್ಗೆ ಜನರಿಗೆ ಸಾಕಷ್ಟು ಆತಂಕ, ಕುತೂಹಲವಿದೆ. ಅದರಲ್ಲೂ ಐಸೋಲೇಷನ್, ಕ್ವಾರಂಟೈನ್ ಎಂಬ ಪದಗಳು ದಿನ ಬೆಳಗಾದರೆ ಕಿವಿಗಪ್ಪಳಿಸುತ್ತಿದ್ದು, ಸೋಂಕು ದೃಢಪಟ್ಟು ಸಾಕಷ್ಟು ಜನ ಸಾವಿನಿಂದ ಬಚಾವಾಗಿದ್ದಾರೆ. ಆದರೆ ರೋಗದ ಸ್ಪಷ್ಟ ಅರಿವಿರದ ಜನ ಇವನ್ನೆಲ್ಲ ಬೆರಗಿನಿಂದಲೇ ನೋಡುತ್ತಿದ್ದಾರೆ. ಹಾಗಿದ್ದರೆ ಕರೊನಾ ಪೀಡಿತರಿಗೆ ನೀಡುವ ಚಿಕಿತ್ಸೆ ಹೇಗಿರುತ್ತದೆ, ಯಾವ ರೀತಿಯ ಆಹಾರ ನೀಡಲಾಗುತ್ತದೆ, ಒಬ್ಬ ವ್ಯಕ್ತಿಯ ಚಿಕಿತ್ಸೆಗೆ ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಕಿರುಮಾಹಿತಿ.
ಕರೊನಾ ವೈರಸ್ಗೆ ನಿರ್ದಿಷ್ಟ ಔಷಧ ಇಲ್ಲ. ಹೀಗಾಗಿ ಸೋಂಕಿತರಿಗೆ ರೋಗ ಲಕ್ಷಣ ಆಧಾರಿತ ಚಿಕಿತ್ಸೆ ನೀಡಲಾಗುತ್ತದೆ. ಇದರ ಪ್ರಮುಖ ಲಕ್ಷಣಗಳು ನೆಗಡಿ, ಕೆಮ್ಮು, ಗಂಟಲು ಕೆರೆತ. ಯಾರಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೋ ಅಂಥವರು ಗುಣಹೊಂದುತ್ತಾರೆ, ಇಲ್ಲದವರಿಗೆ ಸಮಸ್ಯೆ ಹೆಚ್ಚಾಗುತ್ತದೆ. ಅದನ್ನು ನಿಯಂತ್ರಿಸಲು ಆಂಟಿ ಬಯಾಟಿಕ್, ಐವಿ ಫೋ›ಯಿಡ್ ನೀಡಲಾಗುವುದು. ಈ ವೇಳೆ ಸೋಂಕಿತರಿಗೆ ಜ್ವರ ಬಂದರೆ ಪ್ಯಾರಾಸಿಟಮಾಲ್ ಮಾತ್ರೆ ನೀಡಲಾಗುವುದು. ಬ್ಯಾಕ್ಟೀರಿಯಾ ಕಡಿಮೆಯಾದರೆ ನಂತರ ರೋಗಿ ಚೇತರಿಸಿಕೊಳ್ಳುತ್ತಾರೆ ಎನ್ನುತ್ತಾರೆ ವೈದ್ಯರು.
ಹೋಂ ಕ್ವಾರಂಟೈನ್: ಸೋಂಕು ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿ ಇರುವವರು ಯಾರ ಸಂಪರ್ಕಕ್ಕೂ ಬಾರದೆ ಪ್ರತ್ಯೇಕವಾಗಿರಬೇಕು. ಅವರಿಗೂ ಊಟದಲ್ಲಿ ಯಾವುದೇ ಪಥ್ಯ ಇಲ್ಲ ಹಾಗೂ ಚಿಕಿತ್ಸೆಯೂ ಇರುವುದಿಲ್ಲ. ಬದಲಿಗೆ ಆರೋಗ್ಯದಲ್ಲಿ ಸಮಸ್ಯೆಯಾದರೆ, ರೋಗಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗಿ ಪರೀಕ್ಷೆಗೆ ಒಳಗಾಗಬೇಕು.
ಎಲ್ಲರಿಗೂ ಒಂದೇ ಊಟ
ಕರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತ ಹಾಗೂ ಶಂಕಿತ ರೋಗಿಗಳಿಗೆ ಊಟದಲ್ಲಿ ಯಾವುದೇ ಪಥ್ಯ ಹಾಗೂ ವ್ಯತ್ಯಾಸ ಇಲ್ಲದೆ ಒಂದೇ ರೀತಿಯ ಊಟ ನೀಡಲಾಗುತ್ತಿದೆ. ಕೆಲವರು
ಕರೊನಾ ಜತೆಗೆ ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆ ಹೊಂದಿರು ವವರಿದ್ದಾರೆ. ಅಂಥವರಿಗೆ ಡಯೆಟಿಷಿಯನ್ ಸಲಹೆ ಮೇರೆಗೆ ಆಹಾರ ನೀಡಲಾಗುತ್ತದೆ. ಆರಂಭದ ದಿನಗಳಲ್ಲಿ ಕೆಲ ರೋಗಿಗಳಿಗೆ ಅವರ ಬೇಡಿಕೆಯಂತೆ ಹೊರಗಿನಿಂದ ಇಲ್ಲವೇ ಅವರ ಮನೆಗಳಿಂದ ಊಟ ತರಿಸಿ ಕೊಡಲಾಗುತ್ತಿತ್ತು. ಲಾಕ್ಡೌನ್ ನಂತರ ಆಸ್ಪತ್ರೆ ಊಟವನ್ನೆ ನೀಡಲಾಗುತ್ತಿದೆ.
25 ಸಾವಿರ ರೂ. ಖರ್ಚು
ಸೋಂಕಿತ ವ್ಯಕ್ತಿಗೆ ತಗಲುವ ಚಿಕಿತ್ಸಾ ವೆಚ್ಚ 20 ರಿಂದ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ರೋಗಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುತ್ತಿದೆ. ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಈ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ವೇಳೆ ಸೋಂಕಿತ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿ ಐಸಿಯುಗೆ ವರ್ಗಾಯಿಸಿದರೆ ಚಿಕಿತ್ಸೆ ವೆಚ್ಚ ಮತ್ತಷ್ಟು ಹೆಚ್ಚಬಹುದು. ಅಲ್ಲದೆ, ಆತ ಬೇರೆ ರೋಗಗಳಿಂದ ಬಳಲುತ್ತಿದ್ದರೆ ಅದರ ವೆಚ್ಚ ಪ್ರತ್ಯೇಕ. ಅಷ್ಟೇ ಅಲ್ಲ, ರೋಗ ತೀವ್ರತೆ ಹೆಚ್ಚಾಗದಿದ್ದರೂ ರೋಗಿಯನ್ನು 14 ದಿನಗಳ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ.
ರೋಗಿಗಳ ಆಹಾರ ಕ್ರಮ
ಚಿಕಿತ್ಸಾ ವೆಚ್ಚದ ವಿವರ
ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಔಷಧ ಹಾಗೂ ಆಹಾರ ನೀಡಲಾಗುತ್ತದೆ. ರೋಗಿಯ ದೇಹಸ್ಥಿತಿಗೆ ಅನುಗುಣವಾಗಿ ಡಯಟಿಷಿಯನ್ ಸಲಹೆ ಮೇರೆಗೆ ಆಹಾರ, ಹಾಲು, ಹಣ್ಣು ನೀಡಲಾಗುತ್ತದೆ. | ಡಾ. ನಾಗರಾಜ್ ನಿರ್ದೇಶಕ, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ