Nails: ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಗೆರೆಗಳು ಸಾಮಾನ್ಯವಾಗಿ ಆತಂಕಕಾರಿ ವಿಷಯವೇನಲ್ಲ. ಆದರೆ ಕೆಲವೊಮ್ಮೆ ಇವು ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು. ಈ ಬಿಳಿ ಗೆರೆಗಳನ್ನು ವೈದ್ಯಕೀಯವಾಗಿ ಲ್ಯೂಕೊನಿಚಿಯಾ ಎಂದು ಕರೆಯಲಾಗುತ್ತದೆ. ಇದು ಉಗುರಿನ ಮೇಲೆ ಬಿಳಿ ಚುಕ್ಕಿಗಳು, ಗೆರೆಗಳು ಅಥವಾ ಕೆಲವೊಮ್ಮೆ ಸಂಪೂರ್ಣ ಬಿಳಿಯಾಗಿ ಕಾಣುವ ಸ್ಥಿತಿಯಾಗಿರಬಹುದು. ಈ ಬಿಳಿ ಗುರುತುಗಳಿಗೆ ಹಲವು ಕಾರಣಗಳಿರಬಹುದು. ಅದು ಯಾಕೆ ಎಂಬುದನ್ನು ಇಲ್ಲಿ ತಿಳಿಯೋಣ...
ನಿಮ್ಮ ಉಗುರಿನ ಮೂಲದಲ್ಲಿ ಯಾವುದಾದರೂ ಸಣ್ಣ ಅಥವಾ ಒತ್ತಡಗಳಿಂದ ಬಿಳಿ ಗೆರೆಗಳು ಕಾಣಿಸಿಕೊಳ್ಳಬಹುದು. ಇವು ಕೆಲವೊಮ್ಮೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಉಗುರಿಗೆ ಯಾವುದಾದರು ವಸ್ತುಗಳು ತಾಗುವುದು ಅಥವಾ ಸಣ್ಣ ಗಾಯಗಳಿಂದ ಉಗುರುಗಳಲ್ಲಿ ಬಿಳಿ ಗೆರೆಗಳು ಕಾಣಿಸಿಕೊಳ್ಳುತ್ತವೆ.
ಕೆಲವೊಮ್ಮೆ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳಾದ ಜಿಂಕ್, ಕ್ಯಾಲ್ಸಿಯಂ, ಅಥವಾ ಪ್ರೋಟೀನ್ ಕೊರತೆಯಿಂದಾಗಿ ನಿಮ್ಮ ಬೆರಳಿನಲ್ಲಿ ಬಿಳಿಗೆರೆಗಳು ಕಾಣಿಸಿಕೊಳ್ಳಬಹುದು. ಆದರೆ ಇವು ಎಥೇಚ್ಛವಾಗಿ ಕಂಡುಬರುವುದಿಲ್ಲ. ಬದಲಿಗೆ ಅಪರೂಪವಾಗಿ ಕೆಲವೊಂದು ಜನರಲ್ಲಿ ಮಾತ್ರ ಕಾಣಿಸಿಕೊಳ್ಳಬಹದು.
ಉಗುರಿನಲ್ಲಿರುವ ಶಿಲೀಂಧ್ರ ಸೋಂಕು ಬಿಳಿ ಗೆರೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಇದು ಕ್ಯಾಂಡಿಡಾ ಯೀಸ್ಟ್‌ನಿಂದ ಉಂಟಾಗುವ ಓರಲ್ ಥ್ರಷ್‌ನಿಂದ ಬರಬಹುದು. ಇದು ಬಾಯಿ, ಗಂಟಲಿನಲ್ಲಿ ಬಿಳಿ ಪ್ಯಾಚ್‌ಗಳನ್ನು ಉಂಟುಮಾಡುತ್ತದೆ. ಇದರೊಂದಿಗೆ ಉಗುರು ದಪ್ಪವಾಗುವುದು ಅಥವಾ ಒಡೆಯುವುದು ಕಂಡುಬರಬಹುದು.
ನಾವು ಬಳಸುವಂತಹ ಸೌಂದರ್ಯ ವರ್ಧಕಗಳಾದ ನೇಲ್ ಪಾಲಿಷ್, ರಿಮೂವರ್, ಅಥವಾ ಇನ್ನಿತರ ರಾಸಾಯನಿಕ ವಸ್ತುಗಳು ಉಗುರಿನ ಮೇಲೆ ಬೀಳುವುದರಿಂದ ಸೋಂಕು ಉಂಟಾಗಿ ಬಿಳಿ ಗೆರೆಗಳು ಕಾಣಿಸಿಕೊಳ್ಳಬಹುದು.
ಕೆಲವು ಸಂದರ್ಭಗಳಲ್ಲಿ ನಮ್ಮ ಆರೋಗ್ಯದಲ್ಲಾಗುವ ಸಮಸ್ಯೆಗಳಾದ ಯಕೃತ್ತಿನ ಕಾಯಿಲೆ, ಮೂತ್ರಪಿಂಡದ ಸಮಸ್ಯೆ, ಅಥವಾ ರಕ್ತಹೀನತೆಯಂತಹ ಗಂಭೀರ ಸ್ಥಿತಿಗಳು ನಮ್ಮಲ್ಲಿ ಕಂಡುಬಂದರೆ ಲ್ಯೂಕೊನಿಚಿಯಾಕ್ಕೆ ಕಾರಣವಾಗಬಹುದು. ಇದರಿಂದಲೂ ನಿಮ್ಮ ಬೆರಳಿನಲ್ಲಿ ಬಿಳಿ ಗೆರೆಗಳು ಕಾಣಿಸಿಕೊಳ್ಳುತ್ತವೆ.
ಬಿಳಿ ಗೆರೆಗಳು ಸಾಮಾನ್ಯವಾಗಿ ಹಾನಿಕರವಲ್ಲ, ಆದರೆ ಕೆಲವು ಲಕ್ಷಣಗಳು ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಉಗುರು ಸಂಪೂರ್ಣವಾಗಿ ಬಿಳಿಯಾಗಿದ್ದರೆ, ಗಂಭಿರವೆಂದು ಪರಿಗಣಿಸಬಹುದು. ಇದು ನಿಮ್ಮ ದೇಹದಲ್ಲಿ ಯಕೃತ್ತಿನ ಕಾಯಿಲೆಯಿಂದ ಬರುವಂತದ್ದಾಗಿರುತ್ತದೆ. ಇತರ ಲಕ್ಷಣಗಳಾದ ಉಗುರಿನ ಆಕಾರದಲ್ಲಿ ಬದಲಾವಣೆ, ದಪ್ಪವಾಗುವುದು, ಒಡೆಯುವುದು, ಅಥವಾ ಕೆಂಪು ಮತ್ತು ಊತದ ಚಿಹ್ನೆಗಳನ್ನು ಗಂಭೀರವೆಂದು ಪರಿಗಣಿಸಬೇಕು.
ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ನೀವು ಆದಷ್ಟು ಸೇವಿಸಿರಿ. ಜಿಂಕ್, ಕ್ಯಾಲ್ಸಿಯಂ, ಮತ್ತು ಪ್ರೋಟೀನ್‌ನಿಂದ ಸಮೃದ್ಧವಾದ ಆಹಾರ, ಹಣ್ಣು, ತರಕಾರಿಗಳನ್ನು ಸೇವಿಸಿರಿ.
ನಿಮ್ಮ ಉಗುರಿಗೆ ಗಾಯವಾಗದಂತೆ ಎಚ್ಚರಿಕೆ ವಹಿಸಿರಿ. ಉತ್ತಮ ಗುಣಮಟ್ಟದ ನೇಲ್ ಪಾಲಿಷ್ ಮತ್ತು ರಿಮೂವರ್ ಬಳಸಿರಿ. (ಏಜೆನ್ಸೀಸ್)