ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಏನಾಗುತ್ತದೆ? ಉದ್ಯೋಗ ಸಿಗುತ್ತದೆಯೇ ಅಥವಾ ಇಲ್ಲವೇ? ಮದುವೆ ಆಗುತ್ತಾ? ಜೀವನದಲ್ಲಿ ಸೆಟಲ್ ಆಗ್ತೀನಾ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯನ್ನು ಜನರು ತೋರಿಸುತ್ತಾರೆ. ಆದರೆ, ಕೆಲವರಿಗೆ ಈ ಜ್ಯೋತಿಷ್ಯದ ಮೇಲೆ ನಂಬಿಕೆ ಇರುವುದಿಲ್ಲ. ಆದರೂ ಬಹುತೇಕ ಮಂದಿ ಜಾತಕವನ್ನು ನಂಬುತ್ತಾರೆ. ಈ ಕಾರಣಕ್ಕೆ ಜ್ಯೋತಿಷಿಗಳಿಗೆ ತುಂಬಾ ಬೇಡಿಕೆ ಇದೆ.
ಅಂದಹಾಗೆ ನಮ್ಮ ಗ್ರಹಗತಿ ಆಧಾರದ ಮೇಲೆ ನಮ್ಮ ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯವಾಗಿದೆ. ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದರಲ್ಲಿ ಹಸ್ತ ಸಾಮುದ್ರಿಕಾ ಕೂಡ ಒಂದು. ಹಸ್ತ ಸಾಮುದ್ರಿಕ ಎಂದರೆ ಹಸ್ತದ ಮೇಲಿನ ರೇಖೆಗಳ ಆಧಾರದ ಮೇಲೆ ಭವಿಷ್ಯವನ್ನು ಊಹಿಸುವುದು. ಈ ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬುವ ಅನೇಕ ಜನರಿದ್ದಾರೆ. ಅವರಲ್ಲಿ ಸಾಮಾನ್ಯ ನಾಗರಿಕರಷ್ಟೇ ಅಲ್ಲ ಸೆಲೆಬ್ರಿಟಿಗಳು ಕೂಡ ಇದ್ದಾರೆ.
ನಮ್ಮ ಅಂಗೈನಲ್ಲಿ ವಿವಿಧ ರೀತಿಯ ರೇಖೆಗಳು ಅಥವಾ ಗೀರುಗಳಿವೆ. ಈ ಗೆರೆಗಳಿಂದಾಗಿ ಕೆಲವೊಂದು ಚಿಹ್ನೆಗಳು ಕೂಡ ರಚನೆಯಾಗಿವೆ. ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಚಿಹ್ನೆಗಳಿರುತ್ತವೆ. ಕೆಲವರಲ್ಲಿ ಕಲಮದ ಹೂ ಆಕಾರವೂ ಕೂಡ ಇರುತ್ತದೆ. ಅಂಗೈನಲ್ಲಿ ಕಮಲ ಗುರುತು ಹೊಂದಿರುವುದರ ಅರ್ಥ ಏನೆಂದು ನಾವೀಗ ತಿಳಿದುಕೊಳ್ಳೋಣ.
ನಿಮ್ಮ ಅಂಗೈಯಲ್ಲಿ ಕಮಲದ ಹೂ ಗುರುತಿದ್ದರೆ ನೀವು ಬಹಳಷ್ಟು ಹಣವನ್ನು ಪಡೆಯುತ್ತೀರಿ ಎಂಬುದನ್ನು ಸೂಚಿಸುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಮಲದ ಚಿಹ್ನೆಯು ವ್ಯಕ್ತಿಯ ಸಂಪತ್ತನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುತ್ತದೆ. ನಿಮ್ಮ ಕೈಗಳ ಯಾವುದೇ ಭಾಗದಲ್ಲಿ ನೀವು ಕಮಲದ ಚಿಹ್ನೆಯನ್ನು ಕಾಣಬಹುದು. ಕೈಯಲ್ಲಿರುವ ಕಮಲದ ಚಿಹ್ನೆಯು ಕನಿಷ್ಠ 3 ಎಲೆಗಳನ್ನಾದರೂ ಹೊಂದಿರಲೇಬೇಕು. 5 ಎಲೆಗಳನ್ನು ಹೊಂದಿದ್ದರೆ ಅವರನ್ನು ಅತ್ಯಂತ ಅದೃಷ್ಟಶಾಲಿ ಎಂದು ಹೇಳಲಾಗುತ್ತದೆ. ಐದು ಎಲೆಗಳನ್ನು ಹೊಂದಿರುವವರು ತುಂಬಾ ಅಪರೂಪ.
ಈ ಕಮಲದ ಚಿಹ್ನೆಯು ನಿಮ್ಮ ಅಂಗೈನ ಬುಧ ಪರ್ವತದ ಮೇಲೆ ಕಂಡುಬಂದರೆ, ನಿಮ್ಮ ಸೃಜನಶೀಲತೆಯ ಮೂಲಕ ವ್ಯಾಪಾರದಲ್ಲಿ ಯಶಸ್ಸು ಸಾಧಿಸಿ ಅಗಾಧ ಸಂಪತ್ತನ್ನು ಗಳಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ. ಚಂದ್ರ ಪರ್ವತದ ಮೇಲೆ ಕಮಲದ ಚಿಹ್ನೆ ಕಂಡುಬಂದರೆ, ಆ ವ್ಯಕ್ತಿಯು ಪ್ರಖ್ಯಾತಿಯನ್ನು ಅನುಭವಿಸುವ ಸಾಧ್ಯತೆಯಿದೆ. ಸೂರ್ಯ ಪರ್ವತದ ಮೇಲೆ ಕಮಲದ ಚಿಹ್ನೆ ಕಂಡುಬಂದರೆ, ಅದು ವ್ಯಕ್ತಿಯ ಯಶಸ್ಸನ್ನು ಖಾತರಿಪಡಿಸುತ್ತದೆ. ಅಲ್ಲದೆ, ಆ ವ್ಯಕ್ತಿ ಉದ್ಯೋಗ ಅಥವಾ ವ್ಯವಹಾರದಲ್ಲಿ ಅತ್ಯುನ್ನತ ಸ್ಥಾನವನ್ನು ತಲುಪಬಹುದು. ಅವರ ಕ್ಷೇತ್ರದಲ್ಲಿ ಶ್ರೇಷ್ಠ ನಾಯಕರಾಗಬಹುದು. ತಮ್ಮ ಸಂಸ್ಥೆಯಲ್ಲಿ ಉನ್ನತ ಅಧಿಕಾರವನ್ನು ಹೊಂದಿರುತ್ತಾರೆ ಎಂದರ್ಥ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.