ನ್ಯೂಸ್

ಕರ್ತವ್ಯ ವಿಮುಖರಾಗದಿರಿ

Webdesk - Manjunatha B
ಕೃಷ್ಣರಾಜ ಕುತ್ಪಾಡಿ
ಸೀತೆಯ ಹುಡುಕಾಟಕ್ಕಾಗಿ ನಾಲ್ಕೂ ದಿಕ್ಕುಗಳಿಗೆ ಕಪಿಗಳ ಗುಂಪು ಚದುರಿತ್ತು. ಸುಗ್ರೀವನ ಅಪ್ಪಣೆಯಂತೆ ದಕ್ಷಿಣದ ದಿಕ್ಕಿಗೆ ಅಂಗದನ ನೇತೃತ್ವದಲ್ಲಿ ಜಾಂಬವಂತ, ಹನುಮಂತ, ತಾರ ಮೊದಲಾದವರು ಸಾಗಿದ್ದರು. ತಿಂಗಳು ಕಳೆದರೂ ಸೀತೆಯ ಸಣ್ಣ ಸುಳಿವೂ ಇಲ್ಲ. ತಿಂಗಳೊಳಗೆ ವರದಿ ಒಪ್ಪಿಸದಿದ್ದರೆ ಕಠಿಣ ಸಜೆ ಎಂಬುದು ಸುಗ್ರೀವಾಜ್ಞೆ.

ತಾರ ತಾರೆಯ ಸೋದರ. ವಾಲಿಯ ಸಾವಿನ ಹಗೆ ಒಳಗೊಳಗೆ ಮಡುಗಟ್ಟಿತ್ತು. ತಾರ ತನ್ನ ಬೇಳೆ ಬೇಯಿಸತೊಡಗಿದ.

ನ ಕ್ಷಮಿಷ್ಯತಿ ನಃ ಸರ್ವಾನ್ ಅಪರಾಧಕೃತೋ ಗತಾನ್|
ತೀಕ್ಷ್ಣಃ ಪ್ರಕೃತ್ಯಾ ಸುಗ್ರೀವಃ ಸ್ವಾಮಿಭಾವೇ ವ್ಯವಸ್ಥಿತಃ||

ಸುಗ್ರೀವ ತಪ್ಪುಗಳನ್ನು ಸ್ವಲ್ಪವೂ ಸಹಿಸನು. ಸ್ವಭಾವದಿಂದಲೇ ಅತ್ಯಂತ ಕ್ರೂರನು. ಸ್ವಾಮಿಯಾಗಿ ಅಧಿಕಾರವೂ ಅವನ ಕೈಯಲ್ಲಿದೆ.
‘ಕಿಷ್ಕಿಂಧೆಗೆ ಹೋಗಿ ಸಾಯುವುದಕ್ಕಿಂತ, ಬಂಡಾಯರಾಜ್ಯ ಕಟ್ಟಿಕೊಂಡರೆ ಏನು ತಪ್ಪು?’ ಎಂದೆಲ್ಲ ಯೋಚನಾಲಹರಿ ಹರಿಯಿತು. ವಾಲಿಯ ಸಾವಿನಲ್ಲೇ ಈ ಪ್ರತ್ಯೇಕತೆ ಸಿಡಿಯಬೇಕಿತ್ತು. ಕಾರಣ ಸರಿಯಾಗಿ ದೊರೆತಿರಲಿಲ್ಲ. ಈಗ ಕಪಿಗಳಲ್ಲಿ ಬೇರೆಯಾಗುವ ಬೆಂಕಿ ಹತ್ತಿತು. ಅಂಗದನನ್ನು ಅಟ್ಟಕ್ಕೆ ಏರಿಸಿಯಾಗಿತ್ತು. ಎಲ್ಲರಿಗಿದ್ದ ಸುಗ್ರೀವನ ಮೇಲಿನ ಅಸಹನೆಯ ಭಾವವನ್ನೇ ತನ್ನ ತಂತ್ರಗಾರಿಕೆಯ ಅಸ್ತ್ರವಾಗಿ ಬಳಸಿಕೊಂಡ.

‘ಇಷ್ಟು ದಿನಗಳ ಕಾಲ ಕಷ್ಟಪಟ್ಟು ಕಾರ್ಯನಿರ್ವಹಿಸಿದ್ದಕ್ಕೆ ಬೆಲೆಯೇ ಇಲ್ಲ. ಸಾವು ಕೂಡ ತಪ್ಪಿದ್ದಲ್ಲ. ಈ ಎಲ್ಲ ಕಪಿಗಳ ಮನಸ್ಸಿನಲ್ಲಿರುವುದನ್ನೇ ನಾನು ವಿವರಿಸಿದ್ದೇನೆ. ಸುಗ್ರೀವನ ಕೈಲಿರುವ ಅಧಿಕಾರವನ್ನು ಈಗ ಕಸಿಯಲು ಸಾಧ್ಯವಿಲ್ಲ. ಆದರೆ ಸಮಯ ನೋಡಿ ನಮ್ಮ ಅಧಿಕಾರವನ್ನು ವಿಸ್ತರಿಸೋಣ’ ಎಂದು ಅಂಗದನನ್ನು ಪುಸಲಾಯಿಸಿದ.

ಇದಂ ಹಿ ಮಾಯಾವಿಹಿತಂ ಸುದುರ್ಗಮಂ ಪ್ರಭೂತ-ರೂಕ್ಷೋದಕಭೋಜ್ಯ-ಪೇಯಂ|
ಇಹಾಸ್ತಿ ನೋ ನೈವ ಭಯಂ ಪುರಂದರಾತ್
ನ ರಾಘವಾದ್ವಾನರ-ರಾಜತೋಪಿ ವಾ||

‘ನಾವು ಹೊಕ್ಕುಬಂದ ಗುಹೆ ಯಾರಿಂದಲೂ ಕಂಡುಹಿಡಿಯಲಾಗದು. ಸ್ವಯಂಪ್ರಭ ನಮಗೆ ಆತಿಥ್ಯದಲ್ಲಿ ನೀಡಿದ ಕುಡಿಯುವ, ತಿನ್ನುವ ಪದಾರ್ಥಗಳು ರುಚಿಕಟ್ಟಾದ್ದು. ಪರಿಮಿತಿ

ಇಲ್ಲದ್ದು. ಇಲ್ಲೇ ಉಳಿದುಬಿಟ್ಟರೆ ಇಂದ್ರನಿಗೂ ತಿಳಿಯದು. ರಾಮನಿಂದಾಗಲಿ, ಸುಗ್ರೀವನಿಂದಾಗಲಿ ನಮಗೆ ಭಯವಿಲ್ಲ.

ಪರ್ಯಾಯ ಸರ್ಕಾರವನ್ನು ರಚಿಸೋಣ. ಆಗ ನಮ್ಮೆಲ್ಲರ ಉತ್ತರಾಧಿಕಾರಿ ಎಂದಿಗೂ ಅಂಗದನೆ. ನಿಮ್ಮೆಲ್ಲರ ಅಭಿಪ್ರಾಯವೇನು?’ ಎಂಬ ತಾರನ ಮಾತಿಗೆ ಯಾವ ಕಪಿಗಳೂ ವಿರೋಧಿಸಲಿಲ್ಲ. ಜಾಂಬವಂತನೂ ಸುಮ್ಮನಿದ್ದ. ಮೌನವು ಸಮ್ಮತಿಯೇ ಆಗಿತ್ತು.

ಆಗ ಹನುಮಂತ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ. ತಮ್ಮವರಲ್ಲೇ ಅಧಿಕಾರದ ವ್ಯಾಮೋಹ, ಬೂದಿಮುಚ್ಚಿದ ಕೆಂಡದಂತಿದ್ದ ದ್ವೇಷ, ಸ್ವಾರ್ಥ, ಒಡಕು ಬುದ್ಧಿ, ಸಣ್ಣತನಗಳೆಲ್ಲವನ್ನೂ ಕಣ್ಣಾರೆ ಕಂಡು ಬೆರಗಾದ. ಆದರೆ ಈ ಬಿರುಕನ್ನು ಹನುಮಂತ ಮುಚ್ಚಿದ ರೀತಿ ಮಾತ್ರ ಅನುಕರಣೀಯ.

ಮೊದಲು ಅಂಗದನ ಸಾಮರ್ಥ್ಯವನ್ನು ಕೊಂಡಾಡಿದ.
ತ್ವಂ ಸಮರ್ಥತರಃ ಪಿತ್ರಾ ಯುದ್ಧೇ ತಾರೇಯ ವೈ ದ್ರುವಂ|
ದೃಢಂ ಧಾರಯಿತುಂ ಶಕ್ತಃ ಕಪಿರಾಜ್ಯಂ ಯಥಾ ಪಿತಾ||

ತಾರೆಯ ಮಗನಾದ ಅಂಗದನೆ! (ಹನುಮ ತಾಯಿಯನ್ನು ನೆನಪಿಸಿದ) ನೀನು ಕಾಳಗದಲ್ಲಿ ನಮ್ಮ ಬಳಗದ ಎಲ್ಲರಿಗಿಂತಲೂ ಗಟ್ಟಿಗ. ಆಡಳಿತದಲ್ಲಿ ನೀನು ನಿನ್ನ ತಂದೆ ವಾಲಿಯಂತೆ ನಮ್ಮೆಲ್ಲರನ್ನು ಕಾಪಿಡಲು ಶಕ್ತ.

‘ನಿನಗೆ ತಿಳಿದಿದೆ. ಕಪಿಗಳ ಬುದ್ಧಿ ಅತ್ಯಂತ ಚಂಚಲ. ಹೆಂಡತಿ, ಮಕ್ಕಳನ್ನು ಬಿಟ್ಟು ಬದುಕಲಾರರು. ಎಲ್ಲವನ್ನು ಬಿಟ್ಟು ಬದುಕುವ ಹಠಮಾಡಿದರೂ ಅವರೆಲ್ಲರ ಪರಿವಾರದ ಗತಿ ಏನು? ಅವರೇನು ಅಪರಾಧ ಮಾಡಿದ್ದಾರೆ? ಜಾಂಬವಂತ, ನೀಲ, ಸುಹೋತ್ರ ಇವರಾರಿಗೂ ಈ ತಾರನ ನಿರ್ಣಯದಲ್ಲಿ ಸಹಮತಿ ಇಲ್ಲ. ನಿನಗೆ ಬೇಸರ ತಾರದಿರಲು ಸುಮ್ಮನಿರುವರು ಅಷ್ಟೇ. ಮುಂದೆಂದು ಕಿಷ್ಕಿಂಧೆಯ ಮೇಲೆ ದಾಳಿ ಮಾಡಿ ಗೆಲ್ಲಲು ಸಾಧ್ಯವಿಲ್ಲ. ಈಗ ದುಃಖಕ್ಕೆ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ನಿನ್ನ ಮೇಲೆ ಸುಗ್ರೀವನಿಗೆ ಬಹಳ ಪ್ರೀತಿ ಇದೆ. ವೈರವಿದ್ದಿದ್ದರೆ ನಿನ್ನನ್ನು ಕೊನೆಗಾಣಿಸಲು ಇಷ್ಟು ದಿನ ಬೇಕಿತ್ತೆ? ತಾನು ಇನ್ನೂ ಮಕ್ಕಳನ್ನು ಪಡೆಯದೆ, ನಿನ್ನ ತಾಯಿಗೂ ಹಿತವನ್ನೇ ಬಯಸುತ್ತ, ನಿನ್ನನ್ನೇ ಮಗನೆಂದು ಭಾವಿಸಿದ ನಿನ್ನ ಚಿಕ್ಕಪ್ಪನ ಕಕ್ಕುಲಾತಿಯನ್ನು ಕಾಣದೆ ಹೋದೆಯಲ್ಲ?’

ಅಂಗದ ಮತ್ತೂ ತನ್ನ ಸಂದೇಹಗಳನ್ನು ಹೊರ ಹಾಕಿದ. ಹನುಮಂತ ಪರಿಹರಿಸುತ್ತಲೇ ಬಂದ. ಸಾಮ-ಭೇದಗಳಿಗೂ ಬಗ್ಗದಾಗ ರಾಮನ ಮೇಲಿನ ಭಕ್ತಿಯಿಂದ ಕೃದ್ಧನಾದ. ಕಪಿ ವೀರರನ್ನೆಲ್ಲರನ್ನೂ ಎಚ್ಚರಿಸಿದ.

ನಚಾಹಮಾಕೃಷ್ಟುಮುಪಾಯತೋಪಿ
ಶಕ್ಯಂ ಕಥಂಚಿತ್ ಸಕಲೈಃ ಸಮೇತೈಃ|
ಸನ್ಮಾರ್ಗತೋ ನೈವ ಚ ರಾಘವಸ್ಯ
ದುರಂತಶಕ್ತೇರ್ಬಿಲಮಪ್ರಧೃಷ್ಯಂ||

ನಿಮ್ಮ ತಂತ್ರಗಾರಿಕೆಯ ಮಾತುಗಳಿಗೆ ನಾನು ಮರುಳಾಗಲಾರೆ. ನೀವೆಲ್ಲರೂ ಒಂದೆಡೆ ಸೇರಿದರೂ, ನನ್ನನ್ನು ಒಪ್ಪಿಸಲಾರಿರಿ. ನನ್ನ ದಾರಿಯನ್ನು ತಪ್ಪಿಸಲಾರಿರಿ. ಕೊನೆಯಿಲ್ಲದ ಬೀರತನದ ರಾಮನಿಗೆ ಯಾವ ರೀತಿಯಿಂದಲೂ ತಡೆಯೊಡ್ಡದು.

ವಚೋ ಮಮೈತದ್ಯದಿ ಚಾದರೇಣ
ಗ್ರಾಹ್ಯಂ ಭವೇದ್ವಸ್ತದತಿಪ್ರಿಯಂ ಮೇ|
ನಚೇದ್ಬಲಾದಪ್ಯನಯೇ ಪ್ರವೃತ್ತಾನ್
ಪ್ರಶಾಸ್ಯ ಸನ್ಮಾರ್ಗಗತಾನ್ ಕರೋಮಿ||

ನನ್ನ ಮಾತುಗಳನ್ನು ಗಮನವಿಟ್ಟು ಕೇಳಿ. ಅರ್ಥೈಸಿಕೊಳ್ಳಿ. ಒಪ್ಪಿಕೊಂಡು ರಾಮನ ಕಾರ್ಯಕ್ಕಾಗಿ ಹೊರಟು ನಿಂತರೆ ನಾನು ತುಂಬ ಸಂತೋಷ ಪಡುವೆನು. ಕರ್ತವ್ಯವಿಮುಖರಾಗದಿರಿ. ಇನ್ನೂ ವಿರೋಧವನ್ನೇ ಮಾಡುತ್ತ, ತಪ್ಪನ್ನೇ ಮುಂದುವರಿಸುವ ಸಾಹಸಕ್ಕೆ ಕೈ ಇಕ್ಕಿದರೆ ನಿಮ್ಮೆಲ್ಲರನ್ನೂ ನಿಗ್ರಹಿಸುತ್ತೇನೆ. ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುತ್ತೇನೆ.

ಹೀಗೆ ಹನುಮಂತ ರಾಮಭಕ್ತಿ, ಕರ್ತವ್ಯ ನಿಷ್ಠೆಗಳಿಂದ ಕಪಿರಾಜ್ಯ ಒಡೆಯುವುದನ್ನು ಸಮಯಪ್ರಜ್ಞೆಯಿಂದ ತಪ್ಪಿಸಿದ. ರಾಮನಿಲ್ಲದಲ್ಲಿಯೂ ರಾಮನ ನೆನಪು ಧರ್ಮವನ್ನುಳಿಸಿತು. ಕರ್ತವ್ಯತತ್ಪರತೆಯನ್ನು ಎತ್ತಿ ಹಿಡಿಯಿತು.

(ಲೇಖಕರು ಸಂಸ್ಕೃತ ಉಪನ್ಯಾಸಕರು)