ಬೆಂಗಳೂರು: (i: State Contractors' Association) ನಮ್ಮ ಸಂಘಕ್ಕೂ ಮತ್ತು ಗುತ್ತಿಗೆದಾರ ಜಗನ್ನಾಥ್ ಜಿ.ಶೇಗಜಿ ನಡುವೆ ಯಾವುದೇ ಸಂಬಂಧ ಇರುವುದಿಲ್ಲ. ಹಾಗಾಗಿ, ಅವರ ಪತ್ರ ವ್ಯವಹಾರಕ್ಕೆ ಮಾನ್ಯತೆ ಕೊಡಬಾರದು ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದ್ದಾರೆ.
ಈ ಹಿಂದೆ ಸಂಘದ ಗೌರವಾಧ್ಯಕ್ಷರಾಗಿದ್ದ ವೇಳೆ ಜಗನ್ನಾಥ್ ಜಿ.ಶೇಗಜಿ, ಸಂಬಂಧವಿಲ್ಲದ ಕಾಮಗಾರಿ ಬಿಡ್ಗೆ ಸಂಬಂಧಿಸಿದಂತೆ ಬೇರೆಯೊಬ್ಬರ ಗುತ್ತಿಗೆದಾರರಿಂದ ಶೇ.3 ಕಮಿಷನ್ ಬೇಡಿಕೆ ಇಟ್ಟಿರುವುದು ಸಾಬೀತಾಗಿತ್ತು. ಹಾಗಾಗಿ, ಅವರನ್ನು ಸಂಘದ ಗೌರವಾಧ್ಯಕ್ಷ ಹುದ್ದೆಯಿಂದ ಈಗಾಗಲೇ ಅಮಾನತು ಮಾಡಲಾಗಿದೆ. ಜತೆಗೆ, ಸಂಘದ ಪ್ರಾಥಮಿಕ ಸದಸ್ಯತ್ವದಿಂದಲೂ ವಜಾ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಘಕ್ಕೆ ಮತ್ತು ಅವರಿಗೆ ಸಂಬಂಧ ಇರುವುದಿಲ್ಲ. ಇಲಾಖೆಗಳಲ್ಲಿ ಅವರಿಗೆ ಪ್ರಾತಿನಿಧ್ಯ ಕೊಡಬಾರದು. ಪತ್ರ ವ್ಯವಹಾರಕ್ಕೂ ಮಾನ್ಯತೆ ಕೊಡಬಾರದು. ಸಂಘದ ವಿಚಾರವಾಗಿ ಅವರು ಕರೆದಿರುವ ಅಥವಾ ಮುಂದಿನ ದಿನಗಳಲ್ಲಿ ನಡೆಸಲಿರುವ ಯಾವುದೇ ಪ್ರತಿಕಾಗೋಷ್ಠಿಗಳಿಗೆ ಮಾನ್ಯತೆ ನೀಡಬಾರದು ಎಂದರು.