

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO)ಯ ಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಸಚಿವ ( Pakistan Minister ) ಮುಸಾದಿಕ್ ಮಲಿಕ್ ಅವರ ಇಂಡಿಯಾ ಟೂರ್ ಆಸೆಗಳಿಗೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ತಾಜ್ ಮಹಲ್ ಮತ್ತು ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದ ಪಾಕ್ ಸಚಿವರಿಗೆ ಕೇಂದ್ರ ಸರ್ಕಾರ ಖಡಕ್ ಆಗಿ 'ನೋ' ಎಂದಿದ್ದು, ಕೇವಲ ಎಸ್‌ಸಿಒ ಸಭೆಗೆ ಮಾತ್ರ ನಿಮ್ಮ ಭೇಟಿ ಸೀಮಿತವಾಗಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನವೆಂಬರ್ 20 ರಿಂದ 22ರವರೆಗೆ ನವದೆಹಲಿಯ ಐತಿಹಾಸಿಕ ಪುರಾಣ ಕಿಲ್ಲಾದಲ್ಲಿ ನಡೆಯುತ್ತಿರುವ ಮೊದಲ ಶಾಂಘೈ ಸಹಕಾರ ಸಂಸ್ಥೆ (SCO)ಯ ನಾಗರಿಕ ಸಂವಾದ ವೇದಿಕೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಆಗಮಿಸಿದ್ದಾರೆ. ಆದರೆ, ಅವರ ಈ ಭೇಟಿಯು ದೇಶದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ಮೂಲಗಳ ಪ್ರಕಾರ, ಮಲಿಕ್ ಅವರು ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ಮತ್ತು ದೆಹಲಿಯ ನಿಜಾಮುದ್ದೀನ್ ದರ್ಗಾ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿ, ಅದಕ್ಕಾಗಿ ಭಾರತ ಸರ್ಕಾರದ ಅನುಮತಿ ಕೋರಿದ್ದರು. ಆದರೆ, ಕೇಂದ್ರ ಸರ್ಕಾರವು ಅವರ ಎಲ್ಲಾ ಮನವಿಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದು, ಎಸ್‌ಸಿಒ ಸಭೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಅಥವಾ ಇತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
2023ರಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಪಾಲ್ಗೊಂಡ ಬಳಿಕ, ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ವಿಶೇಷವೆಂದರೆ, 2025ರ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' (Operation Sindoor) ಸೇನಾ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಅಂತಾರಾಷ್ಟ್ರೀಯ ಶಿಷ್ಟಾಚಾರದಂತೆ ಭಾರತವು ಅಕ್ಟೋಬರ್ 28ರಂದು ಪಾಕಿಸ್ತಾನ ಸೇರಿದಂತೆ ಎಲ್ಲಾ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಿತ್ತು, ಬಳಿಕ ಪಾಕಿಸ್ತಾನ ಸರ್ಕಾರವು ಮುಸಾದಿಕ್ ಮಲಿಕ್ ಅವರ ಭಾಗವಹಿಸುವಿಕೆಯನ್ನು ದೃಢಪಡಿಸಿತ್ತು. ಪರಸ್ಪರ ಗೌರವದ ನೆಲೆಯಲ್ಲಿ ಎಸ್‌ಸಿಒ ಚೌಕಟ್ಟಿನೊಳಗೆ ನಾಗರಿಕತೆಗಳ ನಡುವಿನ ಸಂವಾದ ಮತ್ತು ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸಲು ಪಾಕಿಸ್ತಾನ ಬದ್ಧವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿಕೆ ನೀಡಿತ್ತು.
ಮತ್ತೊಂದೆಡೆ, ಪಾಕಿಸ್ತಾನದ ಸಚಿವರಿಗೆ ಆಹ್ವಾನ ನೀಡಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರತಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಪಹಲ್ಗಾಮ್ ದಾಳಿಯ ನಂತರ ನೆರೆಯ ರಾಷ್ಟ್ರದೊಂದಿಗಿನ ನೀತಿಯಲ್ಲಿ ಬದಲಾವಣೆ ತರಲು ಈಗ ಏನು ಬದಲಾಗಿದೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ. ಅಲ್ಲದೆ, ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ ವಿಚಾರವಾಗಿ ಇದೇ ಮುಸಾದಿಕ್ ಮಲಿಕ್ ಅವರು ಭಾರತದ ವಿರುದ್ಧ ಅತ್ಯಂತ ಆಕ್ರಮಣಕಾರಿ ಹೇಳಿಕೆಗಳನ್ನು ನೀಡಿದ್ದನ್ನು ಪ್ರತಿಪಕ್ಷಗಳು ಬೊಟ್ಟು ಮಾಡಿ ತೋರಿಸಿವೆ. ಇಂತಹ ತೀವ್ರ ವಿರೋಧ ಮತ್ತು ಭದ್ರತಾ ಸೂಕ್ಷ್ಮತೆಗಳ ನಡುವೆಯೇ ಕೇಂದ್ರ ಸರ್ಕಾರವು ಪಾಕ್ ಸಚಿವರಿಗೆ ಕೇವಲ ಸಭೆಗೆ ಮಾತ್ರ ಅವಕಾಶ ನೀಡಿ, ಪ್ರವಾಸಿ ತಾಣಗಳ ಭೇಟಿಗೆ ಬ್ರೇಕ್ ಹಾಕಿದೆ.
2001ರಲ್ಲಿ ರಷ್ಯಾ, ಚೀನಾ, ಕಿರ್ಗಿಜ್ ಗಣರಾಜ್ಯ, ಕಜಕಿಸ್ತಾನ, ತಜಿಕಿಸ್ತಾನ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷರು ಶಾಂಘೈ ಶೃಂಗಸಭೆಯಲ್ಲಿ ಎಸ್‌ಸಿಒ ಸಂಘಟನೆಯನ್ನು ಸ್ಥಾಪಿಸಿದ್ದು, 2017ರಲ್ಲಿ ಭಾರತ ಮತ್ತು ಪಾಕಿಸ್ತಾನ ಇದರ ಕಾಯಂ ಸದಸ್ಯ ರಾಷ್ಟ್ರಗಳಾದವು ಹಾಗೂ 2023ರಲ್ಲಿ ಇರಾನ್ ಸೇರ್ಪಡೆಯಾಯಿತು. ಈ ಹಿಂದೆ 2024ರ ಅಕ್ಟೋಬರ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಪ್ರಧಾನಿಯವರ ಪರವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪಾಲ್ಗೊಂಡಿದ್ದರು. ಅಲ್ಲದೆ, ಕಳೆದ ತಿಂಗಳು ಮುಂದಿನ ಎಸ್‌ಸಿಒ ರಾಷ್ಟ್ರಗಳ ಮುಖ್ಯಸ್ಥರ ಮಂಡಳಿ ಸಭೆಯ ಪೂರ್ವಭಾವಿ ಸಭೆಗಾಗಿ ಭಾರತ ತನ್ನ ಎಸ್‌ಸಿಒ ರಾಷ್ಟ್ರೀಯ ಸಂಯೋಜಕ ಅಲೋಕ್ ದಿಮ್ರಿ ಅವರನ್ನು ಇಸ್ಲಾಮಾಬಾದ್‌ಗೆ ಕಳುಹಿಸಿತ್ತು, (ಏಜೆನ್ಸೀಸ್).