DMK: ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ಪ್ರಕ್ರಿಯೆಯನ್ನು ತಮಿಳುನಾಡಿನ ಆಡಳಿರೂಢ ಡಿಎಂಕೆ ಪಕ್ಷ ಖಂಡಿಸಿದ್ದು, ಸಾಮೂಹಿಕ ಮತದಾರರ ಅಳಿಸುವಿಕೆ ಎಂದು ಕರೆದಿದೆ. ಸಿಎಂ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ನಡೆದ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ದುರ್ಬಲಗೊಳಿಸಲು ಬಿಜೆಪಿಯೊಂದಿಗೆ ಆಯೋಗ ಸಮನ್ವಯದೊದಿಂದ ಕಾರ್ಯನಿರ್ವಹಿಸುತ್ತಿದೆ. ಸುಪ್ರೀಂಕೋರ್ಟ್ ಎಚ್ಚರಿಕೆ ಹೊರತಾಗಿಯೂ 65 ಲಕ್ಷ ಮತದಾರನ್ನು ಪಟ್ಟಿಯಿಂದ ತೆಗೆದಿದ್ದನ್ನು ಪ್ರಜಾಪ್ರಭುತ್ವ ವಿರೋಧಿ, ಚುನಾವಣೆ ಮುಂಚೆ ಸಮಾನ ಆಟದ ಮೈದಾನವನ್ನು ಅಲುಗಾಡಿಸುವ ಪ್ರಯತ್ನ ಎಂದು ಆರೋಪಿಸಿದೆ.
ಚುನಾವಣಾ ಆಯುಕ್ತರ ನೇಮಕ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ತೆಗೆದುಹಾಕಿದ ನಂತರ, ಚುನಾವಣಾ ಆಯೋಗವು ಚುನಾವಣೆ ನಡೆಸುವುದು ಮತ್ತು ಮತದಾರರ ಪಟ್ಟಿಯ ಸಿದ್ಧತೆ ಮಾಡುವುಡು ರಾಜಕೀಯವಾಗಿ ಮಾರ್ಪಟ್ಟಿದೆ. ಚುನಾವಣಾ ಸಂಸ್ಥೆಯು ಬಿಜೆಪಿ ಜೊತೆ ಸೇರಿ ವಂಚನೆಯಲ್ಲಿ ತೊಡಗಿದ್ದು, ಪ್ರಜಾಪ್ರಭುತ್ವವನ್ನು ಅಣಕಿಸುತ್ತಿದೆ ಎಂದು ಡಿಎಂಕೆ ಆರೋಪಿಸಿದೆ.
ಜುಲೈ 17 ರಂದು ಐದು ಡಿಎಂಕೆ ಸಂಸದರು ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ಮರಣ ಹೊಂದಿದ ಮತದಾರರನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕುವುದು. ಬೂತ್ ಮಟ್ಟದ ಅಧಿಕಾರಿಗಳೊಂದಿಗೆ (ಬಿಎಲ್‌ಒ) ಸಮನ್ವಯವನ್ನು ಸುಧಾರಿಸುವುದು, ಪ್ರಾದೇಶಿಕ ಭಾಷೆಗಳಲ್ಲಿ ಮತದಾರರ ಪಟ್ಟಿ ಕೈಪಿಡಿಗಳನ್ನು ನೀಡುವುದು. ಅಂಚೆ ಮತಪತ್ರಗಳ ಎಣಿಕೆಯಲ್ಲಿ ಸ್ಪಷ್ಟತೆಯನ್ನು ಖಚಿತಪಡಿಸುವುದು. ನಿವಾಸ ಮತ್ತು ವಯಸ್ಸಿನ ಪುರಾವೆಯಾಗಿ ಆಧಾರ್ ಮತ್ತು ಪಡಿತರ ಚೀಟಿಗಳಂತಹ ಬಹು ದಾಖಲೆಗಳನ್ನು ಸ್ವೀಕರಿಸುವುದು ಮುಂತಾದ ಸರಿಪಡಿಸುವ ಕ್ರಮಗಳನ್ನು ಒತ್ತಾಯಿಸುವ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು ಎಂದು ಸಭೆಯಲ್ಲಿ ಗಮನ ಸೆಳೆಯಲಾಯಿತು.
ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ಮೊದಲು ಮತದಾರರ ಪಟ್ಟಿಯನ್ನು ಪಾರದರ್ಶಕ ಮತ್ತು ನಿಷ್ಪಕ್ಷಪಾತ ರೀತಿಯಲ್ಲಿ ಪರಿಶೀಲಿಸಲು ಮತ್ತು ಅಂತಿಮಗೊಳಿಸಲು ಪಕ್ಷವು ಚುನಾವಣಾ ಆಯೋಗವನ್ನು ಒತ್ತಾಯಿಸಿತು. (ಏಜೆನ್ಸೀಸ್)