ನ್ಯೂಸ್

ನಟಿ ಖುಷ್ಬೂ ಆಕ್ರೋಶಕ್ಕೆ ಮಣಿದ ಸ್ಟಾಲಿನ್​ ಸರ್ಕಾರ: ನಾಲಿಗೆ ಹರಿಬಿಟ್ಟ ಡಿಎಂಕೆ ನಾಯಕನಿಗೆ ಆಘಾತ

ಚೆನ್ನೈ: ನಟಿ, ಬಿಜೆಪಿ ನಾಯಕಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಖುಷ್ಬೂ ಸುಂದರ್ ವಿರುದ್ಧ ಅವಹೇಳನಾಕಾರಿ​ ಹೇಳಿಕೆ ನೀಡಿದ ತಮಿಳುನಾಡಿನ ಆಡಳಿತರೂಢ ಡಿಎಂಕೆ ಪಕ್ಷದ ವಕ್ತಾರ ಶಿವಾಜಿ ಕೃಷ್ಣಮೂರ್ತಿಯನ್ನು ಚೆನ್ನೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅಲ್ಲದೆ, ಅವರನ್ನು ಪಕ್ಷದಿಂದಲೂ ಉಚ್ಛಾಟನೆ ಮಾಡಲಾಗಿದೆ.

ಡಿಎಂಕೆ ವಿರುದ್ಧ ಖುಷ್ಬೂ ಕಿಡಿ

ತಮ್ಮ ವಿರುದ್ಧ ಕೃಷ್ಣಮೂರ್ತಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ, ಮಹಿಳೆಯರನ್ನು ಕೀಳಾಗಿ ಕಾಣುವ ವ್ಯಕ್ತಿಗಳಿಗೆ ಆಶ್ರಯ ನೀಡುತ್ತಿರುವುದಕ್ಕೆ ಡಿಎಂಕೆ ವಿರುದ್ಧ ಖುಷ್ಬೂ ಕಿಡಿಕಾರಿದರು. ಅಲ್ಲದೆ, ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ತುಂಬಾ ಗದ್ಗದಿತರಾದ ಖುಷ್ಬೂ ಈ ಪ್ರಕರಣದ ಗಂಭೀರತೆಯನ್ನು ಎತ್ತಿ ತೋರಿಸಿದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಕೃಷ್ಣಮೂರ್ತಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಪಕ್ಷದಿಂದ ಉಚ್ಚಾಟನೆ

ಖುಷ್ಬೂ ಅವರು ಟ್ವಿಟರ್‌ನಲ್ಲಿ ಮತ್ತು ಪತ್ರಿಕಾಗೋಷ್ಠಿಯಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಆಡಳಿತಾರೂಢ ಡಿಎಂಕೆ, ಅಶಿಸ್ತು ಮತ್ತು ಹೆಸರಿಗೆ ಕಳಂಕ ತರುವ ಕಾರಣಕ್ಕಾಗಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸುವುದಾಗಿ ಘೋಷಿಸಿತು. ಬಳಿಕ ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲ ಮಹಿಳೆಯರ ಮೇಲಿನ ದಾಳಿ

ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವ ಬಗ್ಗೆ ಖುಷ್ಬು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು ಮತ್ತು ಎಲ್ಲ ಮಹಿಳೆಯರ ಪರವಾಗಿ ಮಾತನಾಡಿದರು. ಕೃಷ್ಣಮೂರ್ತಿಯಂತಹ ವ್ಯಕ್ತಿಗಳನ್ನು ಡಿಎಂಕೆ ಪೋಷಿಸುತ್ತಿದೆ. ಇದು ಕೇವಲ ಬಿಜೆಪಿ ಮಹಿಳಾ ನಾಯಕಿಯ ಮೇಲಿನ ದಾಳಿಯಲ್ಲ, ಒಟ್ಟಾರೆ ಮಹಿಳೆಯರ ಮೇಲಿನ ದಾಳಿಯಾಗಿದೆ ಎಂದು ಹೇಳಿದರು.

ಬಿಜೆಪಿಯಿಂದ ಟೀಕೆಗಳನ್ನು ಎದುರಿಸಿದ ನಂತರ, ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ವಜಾಗೊಳಿಸಲಾಯಿತು. ಡಿಎಂಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಅವರು ಪಕ್ಷದ ಶಿಸ್ತಿನ ಉಲ್ಲಂಘನೆ ಮತ್ತು ಪಕ್ಷಕ್ಕೆ ಅಪಖ್ಯಾತಿ ತಂದಿರುವ ಕಾರಣ ಕೃಷ್ಣಮೂರ್ತಿ ಅವರ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸುವುದು ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ಉಚ್ಚಾಟನೆ ಮಾಡುವುದಾಗಿ ಘೋಷಿಸಿದರು.

ಕೃಷ್ಣಮೂರ್ತಿ ಅವರು ಈ ಹಿಂದೆ ರಾಜ್ಯಪಾಲ ರವಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು, ಆದರೆ ಅವರು ಕ್ಷಮೆಯಾಚಿಸಿದ ನಂತರ ಅಮಾನತು ಹಿಂತೆಗೆದುಕೊಳ್ಳಲಾಯಿತು. (ಏಜೆನ್ಸೀಸ್​)