More

    ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ

    | ಆರ್.ತುಳಸಿಕುಮಾರ್ ಬೆಂಗಳೂರು

    ವಿದ್ಯುತ್ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ದುಬಾರಿ ಬಿಲ್ ಬಂದಿದೆ ಎಂದು ಕೊರಗುತ್ತಿರುವ ಜನರಿಗೆ ತುಸು ನಿರಾಳ ಎನಿಸಬಹುದಾದ ಪರಿಹಾರ ‘ವಿದ್ಯುಚ್ಛಕ್ತಿ ಕಾಯ್ದೆ – 2003’ರ 56ನೇ ಸೆಕ್ಷನ್​ನಡಿ ಸಿಗಲಿದೆ.

    ಪ್ರತಿ ಕುಟುಂಬಕ್ಕೆ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹಜ್ಯೋತಿ’ ಯೋಜನೆಯನ್ನು ಸರ್ಕಾರ ಘೋಷಿಸಿದ್ದರೂ, ಹಾಲಿ ವಿತರಿಸಿರುವ ಬಿಲ್ ಪಾವತಿ ಸಾರ್ವಜನಿಕರಿಗೆ ಭಾರ ಎನಿಸಿದೆ. ದರ ಪರಿಷ್ಕರಣೆಯಿಂದಾಗಿ ಹಳೇ ಬಾಕಿಯೂ ಸೇರಿ ಮೇನಲ್ಲಿ ಬಳಸಿದ ವಿದ್ಯುತ್​ಗೆ ದುಬಾರಿ ಬಿಲ್ ಬಂದಿದೆ. ಇದರ ಬಗ್ಗೆ ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಚರ್ಚೆ ಕೂಡ ಸಾಕಷ್ಟು ಬಿಸಿ ಏರಿಸಿದೆ. ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ದರ ಇಳಿಸುವ ಕುರಿತು ಸರ್ಕಾರ ಯಾವ ಭರವಸೆಯನ್ನೂ ನೀಡಿಲ್ಲ.

    ಹೀಗಾಗಿ ಎಸ್ಕಾಂಗಳು ಗ್ರಾಹಕರಿಗೆ ವಿತರಿಸಿರುವ ಬಿಲ್ ಪಾವತಿಸದೆ ವಿಧಿಯಿಲ್ಲ. ಆದರೆ, ದುಪ್ಪಟ್ಟು ಬಿಲ್ ಬಂದಿರುವುದರಿಂದ ಗ್ರಾಹಕರು ಆಕ್ಷೇಪವನ್ನು ದಾಖಲಿಸಿ ಬಿಲ್​ನ ಅರ್ಧದಷ್ಟು ಮೊತ್ತವನ್ನು ಮಾತ್ರ ಪಾವತಿಸಿ ಈ ತಿಂಗಳ ಮಟ್ಟಿಗೆ ಕೊಂಚ ಆರ್ಥಿಕ ಹೊರೆ ಇಳಿಸಿಕೊಳ್ಳಬಹುದಾಗಿದೆ. ಅದು ಹೇಗೆಂದರೆ ಎಸ್ಕಾಂ ನೀಡುವ ಮಾಸಿಕ ಬಿಲ್​ನಲ್ಲಿ ಹಿಂದಿಗಿಂತ ಅತಿ ಹೆಚ್ಚು ಮೊತ್ತ ನಮೂದಾಗಿದ್ದಲ್ಲಿ, ಈ ಬಗ್ಗೆ ‘ವಿದ್ಯುಚ್ಛಕ್ತಿ ಕಾಯ್ದೆ – 2003’ರ 56ನೇ ಸೆಕ್ಷನ್ ಅಡಿಯಲ್ಲಿ ಹಿಂದಿನ 6 ತಿಂಗಳ ಬಿಲ್​ನ ಸರಾಸರಿ ಮೊತ್ತವನ್ನು ಮಾತ್ರ ಹಾಲಿ ತಿಂಗಳಿನಲ್ಲಿ ಪಾವತಿಸಬಹುದು. ಇದಕ್ಕಾಗಿ ಗ್ರಾಹಕರು ಸ್ಥಳೀಯ ವಿದ್ಯುತ್ ಉಪಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಕಚೇರಿಗೆ ಧಾವಿಸಿ ಲಿಖಿತವಾಗಿ ಮನವಿ ಸಲ್ಲಿಸಬೇಕು. ಮನವಿಪತ್ರ ಪುರಸ್ಕೃತವಾದ ನಕಲು ಪ್ರತಿಯನ್ನು ಬಿಲ್ ಕೌಂಟರ್​ಗೆ ತೆರಳಿ ಹಣ ಪಾವತಿಸಬಹುದು. ಈ ರೀತಿಯ ಸೌಲಭ್ಯ ಪಡೆದುಕೊಂಡರೂ, ಉಳಿದ ಮೊತ್ತವನ್ನು ಮುಂದಿನ ತಿಂಗಳು ಪಾವತಿಸಬೇಕಾಗುತ್ತದೆ.

    ಎಲ್ಲ ಗ್ರಾಹಕರಿಗೂ ಅನ್ವಯ: ವಿದ್ಯುಚ್ಛಕ್ತಿ ಕಾಯ್ದೆಯಡಿ ಸಿಗುವ ಸೌಲಭ್ಯವು ಎಲ್ಲ ಬಗೆಯ ಗ್ರಾಹಕರಿಗೆ ಅನ್ವಯವಾಗಲಿದೆ. ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ ಬಳಕೆದಾರರು ಸೌಲಭ್ಯ ಪಡೆಯಬಹುದು. ಆದರೆ, ಈ ನಿಯಮ ಹೆಚ್ಚಿನ ಮಂದಿಗೆ ತಿಳಿದಿಲ್ಲ. ಹೀಗಾಗಿ ಬಹುತೇಕ ಗ್ರಾಹಕರು ಸೌಲಭ್ಯ ಪಡೆದಿಲ್ಲ.

    ದರ ಹೆಚ್ಚಳ ಮುಂದೂಡಿ: ವಿದ್ಯುತ್ ದರ ಹೆಚ್ಚಳದಿಂದಾಗಿ ಹೋಟೆಲ್ ಉದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದರ ಹೆಚ್ಚಳವನ್ನು ಒಂದು ವರ್ಷ ಮುಂದೂಡಬೇಕು, ವಿದ್ಯುತ್ ತೆರಿಗೆಯನ್ನು ಶೇ.9ರಿಂದ ಶೇ.3ಕ್ಕೆ ಇಳಿಸಬೇಕು. ಪ್ರೀಪೇಯ್್ಡ ಮೀಟರ್​ಗಳನ್ನು ಅಳವಡಿಸಿ ಗ್ರಾಹಕರ ಠೇವಣಿ ಹಣವನ್ನು ಹಿಂದಿರುಗಿಸಬೇಕು. ಎಸ್ಕಾಂಗಳ ಅನಗತ್ಯ ಆಡಳಿತ ಖರ್ಚು-ವೆಚ್ಚಗಳನ್ನು ಹತೋಟಿಗೆ ತರಬೇಕಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್​ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಕೆಇಆರ್​ಸಿ ಹಾಗೂ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮಾಸಿಕ ಬಿಲ್​ನಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮೊತ್ತ ಬಂದಲ್ಲಿ ಗ್ರಾಹಕರಿಗೆ ಕಂತಿನಲ್ಲಿ ಪಾವತಿಸಲು ಅವಕಾಶ ಇದೆ. ಈ ಸೌಲಭ್ಯವನ್ನು ಕೈಗಾರಿಕೆ ಗ್ರಾಹಕರು ಹೊರತುಪಡಿಸಿ ಅನ್ಯ ಬಳಕೆದಾರರು ಹೆಚ್ಚಾಗಿ ಉಪಯೋಗಿಸಿಕೊಂಡಿಲ್ಲ. ಗೃಹಬಳಕೆ ಗ್ರಾಹಕರು ಲಿಖಿತ ಮನವಿ ಮಾಡಿಕೊಂಡಲ್ಲಿ ಪರಿಶೀಲಿಸಿ ಪರಿಹಾರ ನೀಡಲಾಗುವುದು.

    | ಡಾಕ್ಯಾ ನಾಯಕ್, ಎಇಇ, (ಸಹಕಾರನಗರ ಉಪವಿಭಾಗ), ಬೆಸ್ಕಾಂ

    ಪ್ರತೀ ತಿಂಗಳು ಒಂದು ಸಾವಿರ ರೂ. ಒಳಗೆ ಬಿಲ್ ಬರುತ್ತಿತ್ತು. ಈ ಬಾರಿ ಡಬಲ್ ಮೊತ್ತ ಬಂದಿದೆ. ಬಳಸಿರುವ ಪೂರ್ಣ ಯೂನಿಟ್​ಗಳಿಗೆ 7 ರೂ.ನಂತೆ ಲೆಕ್ಕ ಹಾಕಿರುವುದು ಬಿಲ್ ಹೆಚ್ಚಲು ಕಾರಣವಾಗಿದೆ. ಸ್ಲಾಬ್ ಲೆಕ್ಕಾಚಾರವನ್ನು ಕೆಇಆರ್​ಸಿ ಬದಲಾಯಿಸಿದರೆ ಬಡವರಿಗೆ ಅನುಕೂಲ ಆಗಲಿದೆ.

    | ಶೇಖರ್ ಬಿ.ಎನ್., ಗ್ರಾಹಕ

    ಮೊದಲ ದಿನ 55 ಸಾವಿರ ಅರ್ಜಿ

    ಬೆಂಗಳೂರು: ಗೃಹಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ರಾಜ್ಯದಲ್ಲಿ ಮೊದಲ ದಿನವಾದ ಭಾನುವಾರ 55 ಸಾವಿರ ಅರ್ಜಿ ನೋಂದಣಿಯಾಗಿವೆ. ಗೃಹಜ್ಯೋತಿ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಅವಕಾಶ ಕಲ್ಪಿಸಿದ ಬೆನ್ನಲ್ಲೇ ಗ್ರಾಹಕರು ನೋಂದಣಿಗೆ ಮುಗಿಬಿದ್ದ ಕಾರಣ ಕೆಲ ಕಾಲ ಸರ್ವರ್ ಸಮಸ್ಯೆ ಎದುರಾಗಿತ್ತು. ಆಗಿಂದಾಗ್ಗೆ ಸರ್ವರ್ ಸಮಸ್ಯೆಯನ್ನು ತಾಂತ್ರಿಕ ಸಿಬ್ಬಂದಿ ನಿಭಾಯಿಸಿದ್ದು, ಮೊದಲ ದಿನ ಹೆಚ್ಚಿನ ಸಮಸ್ಯೆಯಾಗಿಲ್ಲ ಎಂದು ಇ-ಆಡಳಿತ ಮೂಲಗಳು ಸ್ಪಷ್ಟಪಡಿಸಿವೆ. ಅತಿ ಹೆಚ್ಚು ಅರ್ಜಿಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ಬಂದಿವೆ. ಸೋಮವಾರದಿಂದ ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿ ಎಲ್ಲ ಕಡೆಯಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ.

    ಕೆಇಆರ್​ಸಿಗೆ ಸಲ್ಲಿಕೆಯಾಗದ ಅರ್ಜಿ

    ಬೆಂಗಳೂರು: ವಿದ್ಯುತ್ ದರ ಏರಿಕೆ ಬಗ್ಗೆ ಮರು ಪರಿಶೀಲನೆಗಾಗಿ ಕರ್ನಾಟಕ ವಿದ್ಯುತ್​ಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ (ಕೆಇಆರ್​ಸಿ) ಈ ತನಕ ಯಾವ ಅರ್ಜಿಯೂ ಸಲ್ಲಿಕೆಯಾಗಿಲ್ಲ. ವಿದ್ಯುತ್ ದರ ಏರಿಕೆ ಬಗ್ಗೆ ತೀವ್ರ ಜನಾಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ದರ ಮರು ಪರಿಷ್ಕರಣೆ ಸಾಧ್ಯತೆಗಳನ್ನು ಪರಿಶೀಲನೆ ಮಾಡಿ, ಅರ್ಜಿ ಸಲ್ಲಿಸುವುದಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದರು. ಸಚಿವರ ಹೇಳಿಕೆಗೆ ವಾರ ಕಳೆಯುತ್ತ ಬಂದಿದ್ದರೂ ಈ ಬಗ್ಗೆ ಈ ತನಕ ಯಾವುದೇ ತೀರ್ಮಾನ ತೆಗೆಕೊಳ್ಳಲು ಸಾಧ್ಯವಾಗಿಲ್ಲ. ಈ ಕುರಿತು ಎಸ್ಕಾಂಗಳಿಂದಲೂ ಅರ್ಜಿ ಬಂದಿಲ್ಲ ಎಂದು ಕೆಇಆರ್​ಸಿ ಸ್ಪಷ್ಟಪಡಿಸಿದೆ. ಸರ್ಕಾರ ಅಥವಾ ಎಸ್ಕಾಂಗಳಿಂದ ಅರ್ಜಿ ಬಂದಲ್ಲಿ ಅದನ್ನು ಮರುಪರಿಶೀಲನೆ ಮಾಡಲು ಕೆಇಆರ್​ಸಿ ಸಿದ್ಧವಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

    ‘ನನ್ನಪ್ಪ ಒಬ್ಬ ಬೆಪ್ಪ.. ನಾನೂ ಬೆಪ್ಪ..’: ಆತ್ಮಾವಲೋಕನ ರೀತಿಯಲ್ಲಿ ಹ್ಯಾಪಿ ಫಾದರ್ಸ್ ಡೇ ವಿಷ್ ಮಾಡಿದ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts