ಬೆಂಗಳೂರು: ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೇಶದಲ್ಲಿ ಎಲ್ಲಾ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿಗೆ ಅರ್ಥವಾಗಿರುವ ಕಾರಣಕ್ಕೆ ಅವರೂ ಸಹ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಕರ್ನಾಟಕ ಮಾದರಿಯನ್ನು ಹಿಂಬಾಲಿಸುತ್ತಿದ್ದಾರೆ. ಅದಕ್ಕೆ ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ 1,500 ರೂಪಾಯಿ ನೀಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ 2,100 ರೂ. ಕೊಡುವುದಾಗಿ ಹೇಳಿದೆ. ನಾವು 3,000, ಯುವಕರಿಗೆ, 4,000 ಹಾಗೂ 25 ಸಾವಿರ ಮೊತ್ತದ ಜೀವವಿಮೆ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ಹೇಳಿದರು.
"ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿಯೇ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ದರು. ಅದಕ್ಕೆ ನಾವು ಅಲ್ಲಿನ ಆಡಳಿತರೂಢ ಪಕ್ಷಗಳಿಗೆ ಕರ್ನಾಟಕಕ್ಕೆ ಭೇಟಿ ನೀಡುವಂತೆ ಸವಾಲು ಹಾಕಿದ್ದೆವು. ಅಲ್ಲದೇ, ವಿಶೇಷ ಬಸ್ ಹಾಗೂ ವಿಮಾನ ಕಾಯ್ದಿರಿಸುವುದಾಗಿ ಹೇಳಿದ್ದೆವು. ನಮ್ಮ ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ 160 ಸ್ಥಾನಗಳನ್ನು ಗೆಲ್ಲುವ ವರದಿಯಿದೆ. ಶುಕ್ರವಾರ ಪ್ರಚಾರ ಮಾಡಿದ್ದು, ಶನಿವಾರ ಹಾಗೂ ಭಾನುವಾರ ಪ್ರಚಾರದಲ್ಲಿ ಭಾಗವಹಿಸುವೆ" ಎಂದು ತಿಳಿಸಿದರು.
"ಇದು ಬಿಜೆಪಿಯ ಮೂರ್ಖತನ. ರೈತರ ಪಹಣಿಗಳಲ್ಲಿ ವಕ್ಫ್ ಎಂದು ಬಿಜೆಪಿ ಕಾಲದಲ್ಲಿ ನಮೂದಾಗಲು ಪ್ರಾರಂಭವಾಯಿತು. ನಮ್ಮವರು ಇದನ್ನು ತಡವಾಗಿ ಗಮನಿಸಿದರು. ಈ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಚುನಾವಣೆಗಳು ಇದ್ದಿದ್ದರಿಂದ ಇವುಗಳನ್ನು ಬಹಿರಂಗಪಡಿಸಲು ಆಗಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ" ಎಂದು ಹೇಳಿದರು.
"ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ನವರು ಮಾತನಾಡಿದರೆ ಮಾಧ್ಯಮಗಳು ಬಿತ್ತರಿಸುತ್ತಿಲ್ಲ. ಕೇವಲ ಬಿಜೆಪಿಯವರ ಆರೋಪಗಳನ್ನು ಮಾತ್ರ ನೀವು ತೋರಿಸುತ್ತಿದ್ದೀರಿ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು, ಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ವಕ್ಫ್ ವಿಚಾರದಲ್ಲಿ ಬಿಜೆಪಿಯ ಎಲ್ಲಾ ಕೈವಾಡವನ್ನು ನಾವು ಬಹಿರಂಗಪಡಿಸುತ್ತೇವೆ" ಎಂದರು.
ಬಿಜೆಪಿ ವಕ್ಫ್ ಅಭಿಯಾನದಲ್ಲಿ ವಿಜಯೇಂದ್ರ ಮತ್ತು ಯತ್ನಾಳ್ ಅವರ ಎರಡು ಬಣಗಳಾಗಿರುವ ಬಗ್ಗೆ ಕೇಳಿದಾಗ, "ಅವರ ಎರಡು ಬಣಗಳ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ಆಮಿಷದ ಬಗ್ಗೆ ಹೇಳಿದರು. ಇದೇ ಯತ್ನಾಳ್ ಅವರು ಸರ್ಕಾರ ಬೀಳಿಸಲು 1 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ಆರೋಪ ಮಾಡಿದ್ದರು. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ?" ಎಂದರು.
"ಶಾಸಕರ ಖರೀದಿ ಬಗ್ಗೆ ತನಿಖೆ ಮಾಡಿ. ಖರೀದಿ ಮಾಡಲು ಶಾಸಕರೇನು ಕುರಿಗಳೇ ಎಂದು ಬಿಜೆಪಿಯವರು ಕೇಳಿದ್ದಾರೆ. ಹಾಗಾದರೆ ಈ ಹಿಂದೆ ಖರೀದಿ ಮಾಡಿದ್ದ ಶಾಸಕರು ಕುರಿಗಳಲ್ಲವೇ? ಬಿಜೆಪಿಯವರು ಕುರಿಗಳನ್ನೇ ಖರೀದಿ ಮಾಡಿದ್ದು. ದನ-ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದಿರಲ್ಲವೇ ಎಂದು ಈ ಹಿಂದೆಯೂ ಪ್ರಶ್ನಿಸಿದ್ದೆವು. ಸಿ.ಪಿ. ಯೋಗೇಶ್ವರ್ ಅವರು ಅಶ್ವತ್ ನಾರಾಯಣ್ ಜತೆಗೂಡಿ ಶ್ರೀನಿವಾಸ್ ಗೌಡರ ಮನೆಗೆ ಹೋಗಿ ಹಣವಿಟ್ಟು ಬಂದೇ ಎಂದು ಸದನದಲ್ಲಿಯೇ ಹೇಳಿಲ್ಲವೇ" ಎಂದು ಹರಿಹಾಯ್ದರು.
ಆಪರೇಷನ್ ಕಮಲದ ಬಗ್ಗೆ ಸಾಕ್ಷಿ ಕೊಡಿ ಎನ್ನುವ ಆರ್.ಅಶೋಕ್ ಅವರ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ, "1 ಸಾವಿರ ಕೋಟಿ ಎಲ್ಲಿಂದ ಬಂತು ಎಂದು ಹೇಳಿರುವ ಯತ್ನಾಳ್ ಅವರು ಸಾಕ್ಷಿ ಕೊಡಬೇಕು. ಇಷ್ಟೊಂದು ಹಣವನ್ನು ಸಂಗ್ರಹ ಮಾಡಿದವರು ಯಾರು? ಇದರ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು, ಅಲ್ಲಿಗೆ ತೆರಳಿ ಈ ಹೇಳಿಕೆಯನ್ನು ನೀಡಿದವರು ಯಾರು ಎಂದು ಆರ್. ಅಶೋಕ್ ಅವರು ತಿಳಿಸಬೇಕು" ಎಂದು ಹೇಳಿದರು.