ನ್ಯೂಸ್

'ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ': ಸಿಎಂ ಸಿದ್ದರಾಮಯ್ಯ

ಮೋಹನ್​ ಶೆಟ್ಟಿ

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಕ್ಕೆ ಬಿಜೆಪಿ ಟೀಕಿಸುತ್ತಿರುವುದರ ಕುರಿತು ಇಂದು ಕಾಂಗ್ರೆಸ್​ ನಾಯಕರು ಡಿಕೆಶಿ ಪರ ಬ್ಯಾಟ್​ ಬೀಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ.


"ಸರ್ಕಾರದ ಸೇವೆಯಲ್ಲಿದ್ದವರ ವಿರುದ್ಧ ತನಿಖೆಯಾಗಬೇಕಾದರೆ ಸರ್ಕಾರದ ಅನುಮತಿ ಅವಶ್ಯ. 2019 ರಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಅನುಮತಿಸಿದಾಗ ಅವರು ಶಾಸಕರಾಗಿದ್ದರು. ಅವರ ವಿರುದ್ಧ ತನಿಖೆಗೆ ಕಾನೂನು ರೀತ್ಯವಾಗಿ ವಿಧಾನಸಭಾಧ್ಯಕ್ಷರಿಂದ ಅನುಮತಿ ಪಡೆದು ನಂತರ ಮುಖ್ಯಮಂತ್ರಿಗಳು ತನಿಖೆ ಕೈಗೊಳ್ಳಲು ಆದೇಶಿಸಬೇಕು ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.

"ಆದ್ರೆ, ವಿಧಾನಸಭಾಧ್ಯಕ್ಷರಿಂದ ಯಾವುದೇ ಅನುಮತಿ ಪಡೆಯದೆ ಹಾಗೂ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪರಿಗಣಿಸದೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕವಾಗಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಅವರ ಮೌಖಿಕ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿಗಳು ಸಿಬಿಐ ತನಿಖೆಗೆ ವಹಿಸಿದ್ದಾರೆ. ಈ ರೀತಿ ಮಾಡುವುದು ಕಾನೂನು ಬಾಹಿರ ಕ್ರಮ" ಎಂದು ಟ್ವೀಟ್​ ಮುಖೇನ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.