ನ್ಯೂಸ್

ಜನರ ಪೀಡಕರಂತೆ ವರ್ತಿಸುವ ಡಿಕೆ ಶಿವಕುಮಾರ್: ನೀರಿನ ದರ ಏರಿಕೆಗೆ ಬಿಜೆಪಿ ಆಕ್ರೋಶ

ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡುವ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಕರ್ನಾಟಕ ಬಿಜೆಪಿ ಮೂರು ಬಿಟ್ಟವರು ಊರಿಗೆ ದೊಡ್ಡವರು. ಡಿಕೆ ಶಿವಕುಮಾರ್ ಜನರ ಪೀಡಕರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

ಜನರ ಪೀಡಕರಂತೆ ವರ್ತಿಸುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂಥವರನ್ನು ನೋಡಿಯೇ 'ಮೂರು ಬಿಟ್ಟವರು ಊರಿಗೆ ದೊಡ್ಡವರು' ಎನ್ನುವು ನಾಣ್ನುಡಿ ಬರೆದಂತೆ ತೋರುತ್ತಿದೆ. ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ದರ್ಪದ ಮಾತುಗಳನ್ನು ಆಡುತ್ತಲೇ ಇದೀಗ ಕುಡಿಯುವ ನೀರಿನ ಬೆಲೆ ಏರಿಕೆ ಮಾಡಿ ಬೆಂಗಳೂರಿಗರ ಜೇಬಿಗೆ ಕತ್ತರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿರುವ ಜನಸಾಮಾನ್ಯರು ಬೆಲೆ ಏರಿಕೆಯ ಭೂತವಾಗಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿಯುವ ಕಾಲ ದೂರವಿಲ್ಲ! ಎಂದು ಬಿಜೆಪಿ ಉಲ್ಲೇಖಿಸಿದೆ.

ಸಾರ್ವಜನಿಕರು ಬೈದರೂ, ನೀರಿನ ಬೆಲೆ ಏರಿಕೆ ಮಾಡ್ತೀನಿ: ಡಿಕೆಶಿ

ಬೆಂಗಳೂರು: ಸಾರ್ವಜನಿಕರು ಬೈದರೂ, ವಿರೋಧ ಪಕ್ಷದವರಾದರು ವಿರೋಧ ಮಾಡಿದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಗುರುವಾರ ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಧ್ಯಮದವರು ಬೈಯಲಿ, ಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ತಲೆಕೆಡಿಸಿಕೊಳ್ಳುವುದಿಲ್ಲ. ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಖಡಕ್​ ಆಗಿಯೇ ಉತ್ತರಿಸಿದರು.

ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಒಳ್ಳೆಯದು ಮಾಡಿದರೂ ಬೈತಾರೆ, ಕಮೆಂಟ್​ ಮಾಡುತ್ತಾರೆ. ಬಿಲ್ ಪಾವತಿಸುವರು ಪಾವತಿ ಮಾಡುತ್ತಾರೆ. ಕೆಲವರು ಪಾವತಿ ಮಾಡಲ್ಲ ನಂತರ ಮರೆತು ಬಿಡ್ತಾರೆ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ‌ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.