ನ್ಯೂಸ್

ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ DK ಶಿವಕುಮಾರ್ ಒತ್ತಾಯ

ನವದೆಹಲಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ತುಂಗಭದ್ರಾ ಎಡದಂಡೆ ಕಾಲುವೆ, ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ, ಮಲಪ್ರಭಾ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು (ERM) ಹಾಗೂ ಸೋಂತಿ ಏತ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುಮತಿ ಹಾಗೂ ಅನುದಾನ ನೀಡುವಂತೆ ರಾಜ್ಯ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ DK ಶಿವಕುಮಾರ್ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನವಿ ಮಾಡಿದರು.

ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಅನುದಾನ ಹಾಗೂ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ರಾಜ್ಯ ಸಣ್ಣ ನೀರಾವರಿ ಸಚಿವ ಬೋಸರಾಜ್, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ ಮತ್ತಿತರರು ಉಪಸ್ಥಿತರಿದ್ದರು.