ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇಶಕ್ಕೆ ಮಾದರಿ ಬಜೆಟ್ ಮಂಡನೆ ಮಾಡಿದ್ದು, ಬಿಜೆಪಿಯವರು ಇದರ ಬಗ್ಗೆ ಸುಳ್ಳು ಹೇಳದೆ ಇನ್ನೇನು ಮಾಡಲು ಸಾಧ್ಯ? ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ.
ಹಲಾಲ್ ಬಜೆಟ್ ಎಂಬ ಬಿಜೆಪಿ ಟೀಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar), ಅವರು ಹೇಳಲಿ. ಪಾಪ ಅವರಾದರೂ ಏನು ಮಾಡುತ್ತಾರೆ. ಈ ರೀತಿ ಹೇಳುವುದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ? ನಮ್ಮ ಬಜೆಟ್ ಅನ್ನು ಅವರು ಕಣ್ಣಾರೆ ಓದಿದ್ದು, ಕಿವಿಯಾರೆ ಕೇಳಿದ್ದು, ಬಾಯಲ್ಲಿ ಇನ್ನೇನು ಹೇಳಲು ಸಾಧ್ಯ? ಕಣ್ಣು ಕಿವಿಯಲ್ಲಿ ಸುಳ್ಳು ಹೇಳಲು ಆಗುವುದಿಲ್ಲ. ಕೇವಲ ಬಾಯಲ್ಲಿ ಮಾತ್ರ ಸುಳ್ಳು ಹೇಳಲು ಸಾಧ್ಯ. ಹೀಗಾಗಿ ಹೇಳುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಐತಿಹಾಸಿಕ ಹಾಗೂ ದೇಶಕ್ಕೆ ಮಾದರಿ ಬಜೆಟ್ ಕೊಟ್ಟಿದ್ದಾರೆ. ಮುಂದೆ ಬೇರೆ ಬೇರೆ ರಾಜ್ಯಗಳು ನಮ್ಮ ಬಜೆಟ್ ಪಾಲನೆ ಮಾಡಲಿವೆ. ಈ ಬಜೆಟ್ ಸಮಾಜದ ಎಲ್ಲಾ ವರ್ಗದವರಿಗಾಗಿ ಮಾಡಿರುವ ಬಜೆಟ್. ಈ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಹಾಗೂ ಇದಕ್ಕೆ ಸಹಕಾರ ಕೊಟ್ಟ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ.
ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಅವರು ಹೆಸರು ಇಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ದೀನದಯಾಳ್ ಹೆಸರು ಇಡುವಾಗ ನಾವು ಮನಮೋಹನ್ ಸಿಂಗ್ ಹೆಸರು ಇಡಬಾರದೆ? ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ನೆಲಮಂಗಲ ಮೇಲ್ಸೇತುವೆ, ಜೆ.ಎನ್ ನರ್ಮ್ ಯೋಜನೆ, ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಶಾ ಕಾರ್ಯಕರ್ತ ಯೋಜನೆ ಜಾರಿಗೆ ತಂದವರು ಇವರು. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರಾ? ದೇಶ ಹಾಗೂ ಕರ್ನಾಟಕ ರಾಜ್ಯದ ಕೊಡುಗೆಗೆ ಮನಮೋಹನ್ ಸಿಂಗ್ ಅವರು ಕೊಟ್ಟಿರುವ ಕೊಡುಗೆಗೆ ಅವರಿಗೆ ಇನ್ನಷ್ಟು ಮಾನ್ಯತೆ ನೀಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಲಾಟರಿ ಹೊಡೆದಿದೆ. ಖರ್ಗೆ ಅವರು ಆರ್ಟಿಕಲ್ 371ಜೆ ಜಾರಿಗೆ ತಂದರು. ಇನ್ನು ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುತ್ತಿದ್ದೇವೆ. ಇಂದು ಕೂಡ ಸಚಿವ ಪ್ರಿಯಾಂಕ್ ಖರ್ಗೆ, ಸಂಸದರಾದ ರಾಧಾಕೃಷ್ಣ ಅವರ ಜತೆ ಜೇವರ್ಗಿಗೆ ತೆರಳಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.
ನೀರಾವರಿ ಇಲಾಖೆಗೆ ಕಳೆದ ಬಾರಿಗಿಂತ ರೂ. 2 ಸಾವಿರ ಕೋಟಿ ಹೆಚ್ಚಿಗೆ ನೀಡಲಾಗಿದೆ. ನೀರಾವರಿಗೆ ನಾವು ಬೇರೆ ಯೋಜನೆ ರೂಪಿಸಿದ್ದೇವೆ. ಮಧ್ಯದಲ್ಲಿ ಬೇರೆ ಘೋಷಣೆ ಆಗಲಿದೆ, ಮಂಡಳಿಗಳಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.