ಮುಂಬೈ: ನವೆಂಬರ್ 20ರಂದು ಮತದಾನ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ (Maharashtra Assembly Election) ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ಇನ್ನೂ ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಪ್ರಚಾರದಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆಯೂ ಚರ್ಚೆ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿರುವ ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ (DCM DK Shivakumar), ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಖುದ್ದು ಜನರಿಂದ ಮಾಹಿತಿ ಪಡೆಯಲು ಮಹಾರಾಷ್ಟ್ರದ ಮಹಾಯುತಿ (ಬಿಜೆಪಿ ಮಿತ್ರ ಪಕ್ಷಗಳು) ನಾಯಕರು ಭೇಟಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ವಿಶೇಷ ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬಿಜೆಪಿಯು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಚಾರವಾಗಿ ಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿತ್ತು. ಈ ಸುಳ್ಳನ್ನು ಬಯಲು ಮಾಡಲು ನಾವು ಮಹಾರಾಷ್ಟ್ರಕ್ಕೆ ಬಂದಿದ್ದೇವೆ. ಯಾವುದೇ ಸಮಯದಲ್ಲಿ ಮಹಾಯುತಿ ನಾಯಕರು ರಾಜ್ಯಕ್ಕೆ ಭೇಟಿ ನೀಡಬಹುದು. ನೇರವಾಗಿ ಜನರ ಬಳಿಗೆ ಬಂದು ಚರ್ಚೆ ಮಾಡಬಹುದು. ನಾನೇ ಖುದ್ದಾಗಿ ನಿಂತು ಈ ವ್ಯವಸ್ಥೆ ಮಾಡಿಕೊಡುತ್ತೇನೆ.
ಗ್ಯಾರಂಟಿ ಯೋಜನೆಗಳು ಜಾರಿಗೂ ಮುನ್ನ ಕರ್ನಾಟಕದ ಜಿಡಿಪಿ ಶೇ 8.2 ರಷ್ಟಿತ್ತು. ಈಗ ಶೇ 10.2 ರಷ್ಟಿದೆ. ಇದು ನನ್ನ ಲೆಕ್ಕಾಚಾರವಲ್ಲ, ಭಾರತ ಸರ್ಕಾರದ ವಿವಿಧ ಸಂಸ್ಥೆಗಳ ಲೆಕ್ಕಾಚಾರ. ಗ್ಯಾರಂಟಿ ವಿಚಾರವಾಗಿ ಸುಳ್ಳು ಹಬ್ಬಿಸಿದ ಪಕ್ಷಗಳ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುವ ಕುರಿತು ನಾವು ಯೋಚನೆ ಮಾಡುತ್ತಿದ್ದೇವೆ. ನುಡಿದಂತೆ ನಡಿದ ನಮ್ಮ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ. ಇವರೆಲ್ಲ ದೇಶದ ಮಹಾನ್ ಸುಳ್ಳುಗಾರರು ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಯೋಜನೆಗಳ ಬಗ್ಗೆ ಆರೋಪ ಮಾಡಿ, ಮಹಾರಾಷ್ಟ್ರದ ಜನತೆಗೆ ಕಾಂಗ್ರೆಸ್ ಪಕ್ಷದ ಬದ್ಧತೆ ಹಾಗೂ ಕೆಲಸಗಳ ಬಗ್ಗೆ ಸತ್ಯವನ್ನು ತಿಳಿಸಲು ಅವಕಾಶ ಮಾಡಿಕೊಟ್ಟ ಮಹಾರಾಷ್ಟ್ರದ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ಧನ್ಯವಾದಗಳು. ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರು ಹಾಗೂ ಅನೇಕ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡುತ್ತಿದ್ದರು. ಆದರೆ ಈಗ ಅವರೇ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಭರವಸೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಹೆಮ್ಮೆ. ಬಿಜೆಪಿ ನಮ್ಮಿಂದ ಗ್ಯಾರಂಟಿ ಯೋಜನೆಯನ್ನು ನಕಲು ಮಾಡಿದೆ ಎಂದು ಆರೋಪಿಸಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಕುರುಡು, ಕುರುಡಾಗಿ ಜಾರಿಗೆ ತಂದಿಲ್ಲ. ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಮೂಲಕ ಈ ದೇಶದ ಲಕ್ಷಾಂತರ ಜನರನ್ನು ಭೇಟಿ ಮಾಡಿ ಅವರ ಬಳಿ ಚರ್ಚೆ ನಡೆಸಿ ಜಾರಿಗೆ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಮಹಾಯುತಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.