ನ್ಯೂಸ್

ಕಾಂಗ್ರೆಸ್​ಗೆ ಬರುವೆ ಎಂದು ಯೋಗೇಶ್ವರ್​ ನನ್ನ ಕಾಲು ಹಿಡಿದಿದ್ದ: ಡಿ.ಕೆ. ಶಿವಕುಮಾರ್​

arunakunigal

ಬೆಂಗಳೂರು: ಅವನೇನು ಮೆಂಟ್ಲಾ? ರಾತ್ರೋರಾತ್ರಿ ಬಂದು ನನ್ನ ಕಾಲಿಗೆ ಬಿದ್ದು 15 ದಿನ ಆಗಿಲ್ಲ. ಹೀಗ್ಯಾಕೆ ಹಿಂಗ್​ ಆಡ್ತಾವ್ನೆ... ಅವನು ತಲೇನಾ ನನ್ನ ಕಾಲತ್ರ 5 ನಿಮಿಷ ಇಟ್ಟಿದ್ದ... ನಾನೇ ಹೋಗ್ಲಿ ಪಾಪ ಅಂತ 'ನಿನ್​ ಪಾರ್ಟಿಗೆ ಲಾಯಲ್​ ಆಗಿರು' ಎಂದು ಹೇಳಿ ಕಳಿಸ್ದೆ... ಎನ್ನುತ್ತ ಸಿ.ಪಿ.ಯೋಗೇಶ್ವರ್​ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಾಗ್ದಾಳಿ ನಡೆಸಿದರು.

ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್​ಗೆ ನಾಮನಿರ್ದೇಶನ ಆಗುತ್ತಿದ್ದಂತೆ ಡಿಕೆಶಿ ಮತ್ತು ಎಚ್​ಡಿಕೆ ವಿರುದ್ಧ ವಾಕ್ಸಮರ ನಡೆಸಿದ್ದರು. ಡಿಕೆಶಿ ಮತ್ತು ಎಚ್​ಡಿಕೆ ಇಬ್ಬರೂ ನಿವೃತ್ತ ಕುದುರೆಗಳು ಎಂದು ಕಟುವಾಗಿ ಟೀಕಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್​ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು​ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಗೆ ತೊಂದರೆ ನೀಡುತ್ತಿದ್ದಾರೆ ಎನ್ನುವ ಮೂಲಕ ಬಿಜೆಪಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್​ ಸಿಡಿಸಿದ್ದಾರೆ. ಈ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಡಿಕೆಶಿ, 'ಯೋಗೇಶ್ವರ್​ ನನ್ನ ಕಾಲಿಗೆ ಬಿದ್ದು 15 ದಿನ ಆಗಿಲ್ಲ.. ಮತ್ತೆ ಆಟ ಶುರು ಮಾಡಿಕೊಂಡಿದ್ದಾನೆ, ಅವನಿಗೇನು ಮೆಂಟ್ಲಾ?' ಎಂದು ಆಕ್ರೋಶ ಹೊರಹಾಕಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿಪಿವೈ, 'ಡಿಕೆಶಿ ಸಹೋದರರು ಕುಮಾರಸ್ವಾಮಿಗೆ ತೊಂದರೆ ಮಾಡ್ತಾ ಇದ್ದಾರೆ. ಎಚ್​.ಡಿ. ಕುಮಾರಸ್ವಾಮಿ ನಮ್ಮ ಸರ್ಕಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡ್ತಿದ್ದಾರೆ.‌ ನಮ್ಮ ಪಕ್ಷಕ್ಕೆ ಬೆಂಬಲ ಕೊಡಿ ಹಾಗೂ ನಮ್ಮ‌ ಪಕ್ಷದ ಜತೆಗೆ ಬನ್ನಿ' ಎಂದು ಬಹಿರಂಗವಾಗಿಯೇ ಜೆಡಿಎಸ್​ಗೆ ಆಹ್ವಾನ ನೀಡಿದರು.

ಇದರ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, 15 ದಿನದ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಯೋಗೇಶ್ವರ್​, ಯಡಿಯೂರಪ್ಪ ನನ್ನನ್ನು ಕಡೆಗಣಿಸುತ್ತಿದ್ದಾರೆ. ಕಾಂಗ್ರೆಸ್​ಗೆ ಬರುವೆ ಎಂದು ಹೇಳಿದ್ದ. ಈಗ ಉಲ್ಟಾ ಮಾತಾಡುತ್ತಿದ್ದಾನೆ ಎಂದು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡರು.