ನ್ಯೂಸ್

ಬಿಜೆಪಿಯಿಂದ ಗಾಂಧಿ ಅವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸವಾಗುತ್ತಿದೆ: DCM DK Shivakumar

ಬೆಂಗಳೂರು: ಬಿಜೆಪಿಯವರು ಗಾಂಧಿಯವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅದನ್ನು ಉಳಿಸುವ ಕೆಲಸ ಮಾಡಬೇಕು. ಮಹಾತ್ಮ ಗಾಂಧಿ ಅವರ ತತ್ವಗಳನ್ನು ಒಪ್ಪದ ಬಿಜೆಪಿಯವರು ಅವರ ಪ್ರತಿಮೆ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಕಿಡಿಕಾರಿದ್ದಾರೆ.

ಹುತಾತ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಬಿಜೆಪಿಯವರು ಗಾಂಧಿ ಅವರ ತತ್ವಗಳನ್ನು ಬಾಯಲ್ಲಿ ಹೇಳದೇ ಇರಬಹುದು ಆದರೆ ಆಡಳಿತ ಪಕ್ಷವನ್ನು ವಿರೋಧಿಸಲು ಗಾಂಧಿ ಅವರ ಪ್ರತಿಮೆಯನ್ನೇ ಆಶ್ರಯಿಸಬೇಕು. ಧರಣಿ ಮಾಡಬೇಕು ಎಂದು ಹೇಳಿಕೊಟ್ಟವರೇ ಗಾಂಧಿ.

ಗಾಂಧಿ ಅವರ ಮೌನ, ಧ್ಯಾನದ ಹಿಂದೆ ದೊಡ್ಡ ಸಂದೇಶವಿದೆ. ಸ್ವದೇಶಿ ಆಲೋಚನೆ ಹೇಳಿಕೊಟ್ಟವರು ಗಾಂಧಿ. ಪ್ರಧಾನಿ ಅವರು ಇದನ್ನೇ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಿದ್ದಾರೆ. ಗಾಂಧೀಜಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದವರು. ಪಕ್ಷದ ಅಧ್ಯಕ್ಷರಾಗಿ ಸ್ವಾತಂತ್ರ್ಯ ತಂದುಕೊಟ್ಟರಲ್ಲ ಎನ್ನುವ ಅಸಹನೆ ಬಿಜೆಪಿಯವರಿಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಏನಿಲ್ಲ. ಬಿಜೆಪಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಳೆದ 11 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿಲ್ಲ. ಬಿಡ್ಬ್ಯೂಎಸ್ ಎಸ್ ಬಿಗೆ ವರ್ಷಕ್ಕೆ ಸುಮಾರು 1 ಸಾವಿರ ಕೋಟಿ ನಷ್ಟವಾಗುತ್ತಿದೆ. ಆದ ಕಾರಣ ನಮ್ಮ ಮುಂದೆ ಯಾವುದೇ ಪರ್ಯಾಯ ಆಲೋಚನೆಗಳಿಲ್ಲ. ಮಂಡಳಿಯನ್ನು ಉಳಿಸಬೇಕು ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ. ಜೊತೆಗೆ ನೀರಿನ ಸಂಪರ್ಕ ಜಾಲವನ್ನು ಹೆಚ್ಚು ಮಾಡಬೇಕಿದೆ ಇದಕ್ಕೆ ಸುಮಾರು 6 ಸಾವಿರ ಕೋಟಿ ಬೇಕಾಗಿದೆ. ಇದಕ್ಕಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.