ನ್ಯೂಸ್

ಭವಿಷ್ಯದಲ್ಲೂ ಬೆಂಗಳೂರು ಉತ್ತಮವಾಗಿರುವಂತೆ ಯೋಜನೆ ರೂಪಿಸಬೇಕು, ಇಲ್ಲದಿದ್ದರೇ ನಾವು ಮೋಸ ಮಾಡಿದಂತೆ: DK Shivakumar

Webdesk - Manjunatha B

ಬೆಂಗಳೂರು: ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ (DK Shivakumar) ಹೇಳಿದ್ಧಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ. ಶಿವಕುಮಾರ್ (DK Shivakumar), ಕೇವಲ ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ. ಆದರೆ ನಾವು ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಅನುಷ್ಠಾನಕ್ಕೆ ತಂದರೆ ಮಾತ್ರ ಇದು ಸಾಧ್ಯವಾಗುತ್ತದೆ. ರಕ್ಷಣೆ, ಗುಣಮಟ್ಟ ಮತ್ತು ಏಕರೂಪತೆ ಕಾಪಾಡುವುದು ನಮ್ಮ ಗುರಿಯಾಗಿದೆ.

ನಗರದ ಎಲ್ಲಾ ರಸ್ತೆಗಳ, ಪಾದಚಾರಿ ಮಾರ್ಗಗಳ ವಿನ್ಯಾಸ ಏಕರೂಪತೆಯಿಂದ ಕೂಡಿರಬೇಕು ಎನ್ನುವುದು ನಮ್ಮ ಉದ್ದೇಶ. ರಸ್ತೆ ಬದಿ ಕಂಬಗಳ ಬಣ್ಣವೂ ಸಹ ಮೊದಲೇ ನಿರ್ಧಾರ ಮಾಡಲಾಗುವುದು. ನಗರದ ಅನೇಕ ಕಡೆ ಬೇರೆ, ಬೇರೆ ವಿನ್ಯಾಸ ಬಸ್ ನಿಲ್ದಾಣಗಳಿವೆ ಅವುಗಳನ್ನು ಸಹ ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಈ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಲಾಗುವುದು.

ಹೊಸ ಯೋಜನೆಗಳು, ಬೆಂಗಳೂರಿನ ರೂಪುರೇಷೆಗಳ ಬಗ್ಗೆ, ಪ್ರತಿ ನಾಗರೀಕನ ಆಸ್ತಿ ರಕ್ಷಣೆ ಕುರಿತು ಹೊಸ ನೀತಿಗಳನ್ನು ತರಲಾಗಿದ್ದು ಅದನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಹಿರಂಗಗೊಳಿಸಲಾಗುವುದು. ಹೊಸ ಆಲೋಚನೆಯನ್ನು ನೀಡಲು ವಿದ್ಯಾರ್ಥಿಗಳು, ಯುವಕರು ಮುಂದೆ ಬಂದಿರುವುದು ಸಂತಸದ ವಿಚಾರ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಸೇರಿದ್ದೀರಿ. ಯುವ ಸಮುದಾಯ ಸೇರಿ ಇಡೀ ಬೆಂಗಳೂರನ್ನು ವಿಶ್ವಮಟ್ಟಕ್ಕೆ ಏರಿಸಬೇಕು ಎನ್ನುವ ಆಲೋಚನೆಯಿಟ್ಟುಕೊಂಡು ಸಲಹೆಗಳನ್ನು ನೀಡಬೇಕು. ಎಲ್ಲರೂ ಒಟ್ಟಾಗಿ ಸೇರಿ ಬೆಂಗಳೂರನ್ನು ಸದೃಢಗೊಳಿಸೋಣ ಎಂದು ಡಿಕೆ. ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ.