ಬೆಂಗಳೂರು: ಗಲಭೆಕೋರರ ದಾಂಧಲೆಯಿಂದ ಹಿಂಸಾಚಾರಕ್ಕೆ ತಿರುಗಿದ್ದ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ಭೈರಸಂದ್ರ ಸಹಜ ಪರಿಸ್ಥಿತಿಗೆ ಬಂದಿದೆ. ತನಿಖೆ ವೇಳೆ ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿದ್ದು, ವಿಡಿಯೋ ಫೂಟೇಜ್ ಸೇರಿ ವಿವಿಧ ದಾಖಲೆ ಪ್ರಕಾರ ಎಸ್ಡಿಪಿಐ ಕೈವಾಡ ಇರುವುದು ಗೊತ್ತಾಗುತ್ತಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕೋವಿಡ್ ಜತೆಗೆ ಆತ್ಮಸ್ಥೈರ್ಯ ದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ ಗೃಹ ಸಚಿವರು, ಬೆಂಗಳೂರಿನಲ್ಲಿ ಗಲಭೆ ಪ್ರಕರಣದ ಹಿಂದೆ ಯಾವ ಪಕ್ಷದ ಮತ್ತು ಸಂಘಟನೆಯ ಕೈವಾಡ ಇದೆ ಎಂಬುದನ್ನೂ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ. ಎಸ್ಡಿಪಿಐ ಮೇಲಿನ ಬೆಂಗಳೂರು, ಮಂಗಳೂರು ಇತರೆಕಡೆಯ ಪ್ರಕರಣದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಮಾಹಿತಿ ಆಧಾರದ ಮೇಲೆ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.