ನ್ಯೂಸ್

ನಿಗಮ ಮಂಡಳಿ ನೇಮಕ ಸುಸೂತ್ರ; 30:70ರ ಅನುಪಾತದಲ್ಲಿ ಶಾಸಕರು, ಕಾರ್ಯಕರ್ತರಿಗೆ ಹಂಚಿಕೆಗೆ ಸೂಚನೆ

ಬೆಂಗಳೂರು: ಲೋಕಸಭೆ ಚುನಾವಣೆ ಮತ್ತು ಸರ್ಕಾರದ ಆಗುಹೋಗುಗಳ ಪರಾಮರ್ಶೆಗಾಗಿ ದೆಹಲಿಯಲ್ಲಿ ಹೈಕಮಾಂಡ್ ಕರೆದಿದ್ದ ಪ್ರಮುಖ ಸಭೆಯಲ್ಲಿ ರಾಜ್ಯ ನಾಯಕರಿಗೆ ಹಲವು ಸಂದೇಶ ಸಿಕ್ಕಿದೆ. ಜತೆಗೆ, ಕಾರ್ಯಕರ್ತರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳುವ ಮಹತ್ತರ ಗುರಿಯನ್ನು ನೀಡಲಾಗಿದೆ.

ಸರ್ಕಾರ ರಚನೆ ಬಳಿಕ ದಾಟಬೇಕಾದ ಮೂರು ಹಂತಗಳನ್ನು ಗುರುತಿಸಿದ್ದ ಕಾಂಗ್ರೆಸ್, ಆ ಪ್ರಕಾರ ಬಜೆಟ್ ಮಂಡನೆ ಮೂಲಕ ಗ್ಯಾರಂಟಿ ಅನುಷ್ಠಾನಗೊಳಿಸುತ್ತಿದೆ. ನಂತರ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ಕೊಟ್ಟಿದೆ. ಮೂರನೇ ಕಾರ್ಯವಾಗಿ ನಿಗಮ- ಮಂಡಳಿಗಳ ನೇಮಕ ಮಾಡುವ ಕಾರ್ಯ ನಡೆಯಲಿದೆ.

ನಿಗಮ- ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ, ಸದಸ್ಯರನ್ನು ಆಯ್ಕೆ ಮಾಡುವಾಗ ಯಾವ ರೀತಿ ಆಯ್ಕೆಗಳು ನಡೆಯಬೇಕೆಂಬ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ಜತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ವಿಜಯವಾಣಿಗೆ ಲಭ್ಯವಾದ ಮಾಹಿತಿಗಳ ಪ್ರಕಾರ ಎರಡು ಸೂತ್ರವನ್ನು ಅಳವಡಿಸಿಕೊಳ್ಳಲು ನಿಶ್ಚಯಿಸಲಾಗಿದೆ. ಒಟ್ಟು ನಿಗಮಗಳ ಪೈಕಿ ಶೇ.30ರಷ್ಟನ್ನು ಶಾಸಕರಿಗೆ, ಶೇ.70ರಷ್ಟನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲು ಉದ್ದೇಶಿಸಲಾಗಿದೆ. ಅಲ್ಲದೇ, ಒಟ್ಟು ಹಂಚಿಕೆಯಲ್ಲಿ ಶೇ.50ರಷ್ಟನ್ನು ಯುವಕರಿಗೆ ನೀಡಬೇಕೆಂಬ ಸೂಚನೆಯೂ ಇದೆ. ಅಷ್ಟೇ ಅಲ್ಲದೇ ಲೋಕಸಭೆ ಚುನಾವಣೆ ಉದ್ದೇಶದಿಂದ ತಡಮಾಡದೇ ನೇಮಕ ಪ್ರಕ್ರಿಯೆ ನಡೆಯಬೇಕು, ಸಮುದಾಯವಾರು ಪ್ರಾತಿನಿಧ್ಯ ಕೊಡಬೇಕು, ಚುನಾವಣೆಯಲ್ಲಿ ದುಡಿದವರಿಗೆ ಮಣೆಹಾಕಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಒಟ್ಟಾರೆ 85 ಮಂದಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷರಾಗಿ ನೇಮಕ ಮಾಡಲು ಅವಕಾಶವಿತ್ತು. ಆದರೆ, ಇತ್ತೀಚೆಗೆ ಕೆಲವನ್ನು ರದ್ದು ಮಾಡಲಾಗಿದೆ, ಇನ್ನಷ್ಟು ರದ್ದು ಮಾಡುವ ಅಥವಾ ಇಲಾಖೆಯೊಂದಿಗೆ ವಿಲೀನಗೊಳಿಸುವ ಕಾರ್ಯ ಇಷ್ಟರಲ್ಲೇ ನಡೆಯಲಿದೆ. ಹೀಗಾಗಿ ಅಂದಾಜು 70 ಮಂದಿಗೆ ಅವಕಾಶ ಸಿಗಲಿದೆ. ಈ ಪೈಕಿ 21-22 ಶಾಸಕರಿಗೆ ಪ್ರಮುಖ ಅಥವಾ ಲಾಭದಾಯಕ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆ ಸಿಗಬಹುದು.

ವಿಶ್ವಾಸ ಹೆಚ್ಚಿಸುವ ಪ್ರಯತ್ನ: ವಿಧಾನಸಭೆ ಚುನಾವಣೆಯಲ್ಲಿ ಸವಾಲು ಎದುರಿಸಿ ಶ್ರಮ ಹಾಕಿದ ಮುಖಂಡರು ಸಹಜವಾಗಿ ಸರ್ಕಾರದಿಂದ ಸಣ್ಣ ಲಾಭ ನಿರೀಕ್ಷಿಸುತ್ತಾರೆ. ಅವರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಿದಾಗ ಪಕ್ಷಕ್ಕೂ ಬಲ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಸಿಎಂ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಶೀಘ್ರವೇ ಆಯ್ಕೆ ಪ್ರಕ್ರಿಯೆ ಆರಂಭಿಸುತ್ತಾರೆ. ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಮುಗಿಯಬಹುದು ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಅಗ್ರೆಸಿವ್ ಪಾಠ: ಲೋಕಸಭೆ ಚುನಾವಣೆಯಲ್ಲಿ ಮೋದಿ ಫ್ಯಾಕ್ಟರ್ ಕೆಲಸ ಮಾಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ತಡಮಾಡದೇ ಅಗ್ರೆಸಿವ್ ಆಗಿ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳಬೇಕೆಂದು ಪಕ್ಷದ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ಕೊಟ್ಟಿದ್ದಾರೆ. ಬೆಲೆ ಏರಿಕೆ, ರೈತರ ಆದಾಯ ದ್ವಿಗುಣವಾಗಿಲ್ಲ, 15 ಲಕ್ಷ ರೂ. ಖಾತೆಗೆ ಹಾಕಿಲ್ಲ, 2 ಕೋಟಿ ಉದ್ಯೋಗ ನೀಡಿಲ್ಲ ಎಂಬ ಸಂಗತಿಯನ್ನು ಜನರ ನಡುವೆ ಒತ್ತಿ ಹೇಳುವಂತೆ ಮತ್ತು ಸಮಾವೇಶಗಳಲ್ಲಿ ಪ್ರಸ್ತಾಪಿಸುವಂತೆ ರಾಹುಲ್ ನಿರ್ದೇಶನ ಕೊಟ್ಟಿದ್ದಾರೆ.

ಹಿರಿಯರ ಹಿಂದೇಟು: ಈ ನಡುವೆ ಸಚಿವಾಕಾಂಕ್ಷಿ ಗಳಾಗಿರುವವರು ನಿಗಮ- ಮಂಡಳಿಯಲ್ಲಿ ತೃಪ್ತಿಪಡುವ ಆಶಯ ಹೊಂದಿಲ್ಲ. ನಾನು ನಿಗಮ ಮಂಡಳಿ ಆಯ್ಕೆ ಮಾಡಿಕೊಳ್ಳುವ ಕೆಟ್ಟ ಕೆಲಸ ಮಾಡಲ್ಲ ಎಂದು ಶಾಸಕರೊಬ್ಬರು ಈಗಾಗಲೇ ಅನೌಪಚಾರಿಕ ಪ್ರಕ್ರಿಯೆಯನ್ನೂ ನೀಡಿದ್ದಾರೆ. ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ, ವರ್ಗಾವಣೆಗೆ ಮನ್ನಣೆ ಸಿಗುತ್ತಿಲ್ಲ ಎಂದು ದನಿ ಎತ್ತಿದ ಶಾಸಕರ್ಯಾರೂ ನಿಗಮ ಮಂಡಳಿ ಅಪೇಕ್ಷಿತರಲ್ಲ. ಆದರೆ, ಅವರೆಲ್ಲರಿಗೂ ‘ಹೈಪ್ರೊಫೈಲ್’ ನಿಗಮ- ಮಂಡಳಿ ಕೊಡಬೇಕೆಂದು ಪಕ್ಷ ಬಯಸಿದೆ. ಅವರೆಲ್ಲ, ಭವಿಷ್ಯದಲ್ಲಿ ಸಂಪುಟ ಪುನಾರಚನೆ ನಡೆದು, ಅದರಲ್ಲಿ ತಮಗೆ ಅವಕಾಶ ಸಿಗಬಹುದೆಂಬ ಅಪೇಕ್ಷೆ ಇಟ್ಟುಕೊಂಡಿದ್ದಾರೆ.

 ಆ.5ರಿಂದಲೇ ಗ್ಯಾರಂಟಿ ಸಮಾವೇಶ

 ಆ.5ರಂದು ಗೃಹ ಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ. ಇದೇ ವೇಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಉದ್ಘಾಟನಾ ಕಾರ್ಯಕ್ರಮದ ಸಮಾವೇಶ ನಡೆಸಲು ಕಾಂಗ್ರೆಸ್ ತೀರ್ವನಿಸಿದೆ. ದೆಹಲಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಕಡ್ಡಾಯವಾಗಿ ಸಮಾವೇಶದಲ್ಲಿ ಇರಬೇಕೆಂದು ಸೂಚಿಸಲಾಗಿದೆ. ಆಗಸ್ಟ್, ಸೆಪ್ಟೆಂಬರ್ ವೇಳೆಗೆ ಗ್ಯಾರಂಟಿ ಅನುಷ್ಠಾನ ಒಂದು ಹಂತಕ್ಕೆ ಬಂದಿರುತ್ತದೆ. ಅದಾದ ಬಳಿಕ ಯೋಜನೆವಾರು ಸಮಾವೇಶಗಳನ್ನು ಪ್ರತ್ಯೇಕವಾಗಿ ನಡೆಸಲು ಉದ್ದೇಶಿಸಲಾಗಿದೆ.