ನ್ಯೂಸ್

ವಿಕಸಿತ ಯಾತ್ರೆಗೆ ರಾಜ್ಯದಲ್ಲಿ ಅಸಹಕಾರ; ಕಾಂಗ್ರೆಸ್ ಸರ್ಕಾರದ ಸ್ಪಂದನೆ ಕ್ಷೀಣ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮದ ಭಾಗವಾಗಬೇಕಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯು ಅಸಹಕಾರದ ಸುಳಿಗೆ ಸಿಲುಕಿ, ಬಿಜೆಪಿ ಕಾರ್ಯಕ್ರಮವೆಂಬಂತೆ ಬಿಂಬಿತವಾಗಿದೆ.

ಕೇಂದ್ರ ಸರ್ಕಾರ ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳ ಪ್ರಚಾರ, ಮಾಹಿತಿ ಪ್ರಸಾರ ಯಾತ್ರೆಯ ಉದ್ದೇಶವಾಗಿದೆ. ತಳಸ್ತರದವರು, ಬಡವರು, ಮಹಿಳೆಯರು, ರೈತರನ್ನು ಕೇಂದ್ರೀಕರಿಸಿದ 78 ಯೋಜನೆಗಳ ಕುರಿತು ವಿಡಿಯೋ, ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜನರಲ್ಲಿ ಅರಿವು ಮೂಡಿಸುವುದು, ಫಲಾನುಭವಿಗಳೊಂದಿಗೆ ಸಂವಾದ, ವಿವಿಧ ಚಟುವಟಿಕೆಗಳ ಮೂಲಕ ವ್ಯಾಪಕ ಪ್ರಚಾರಕ್ಕೆ ಒತ್ತು ನೀಡಲಾಗಿದೆ. ಪ್ರತಿ ಲೋಕಸಭೆ ಕ್ಷೇತ್ರಕ್ಕೊಂದರಂತೆ ಡಿಜಿಟಲ್ ವಾಹನ ಒದಗಿಸಲಾಗಿದೆ. ಆಯಾ ಕ್ಷೇತ್ರದ ಗ್ರಾಪಂ, ನಗರ-ಪಟ್ಟಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಕೇಂದ್ರ ಸರ್ಕಾರ ಸೂಚಿಸಿರುವ ಪ್ರಕಾರ ರಾಜ್ಯ ಸರ್ಕಾರಗಳು ಕೈಜೋಡಿಸಿ ಯಾತ್ರೆಯ ಉದ್ದೇಶ ಸಫಲಗೊಳಿಸಬೇಕೆಂದಿದ್ದು, ವಂಚಿತ ಅರ್ಹರು ಪ್ರಯೋಜನ ಪಡೆಯುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿದೆ.

ರಾಜಕೀಯ ಸೋಂಕು: ಅಧಿಕ ಜನರನ್ನು ತಲುಪಿ, ಹೆಚ್ಚೆಚ್ಚು ಪ್ರಯೋಜನ ಒದಗಿಸಲು ಯಾತ್ರೆಗೆ ರಾಜಕಾರಣ ಸೋಂಕು ತಗುಲಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವುದು ಒಂದು ಕಾರಣವಾದರೆ, ಸಮರ್ಪಕ ಮಾಹಿತಿ ಹಾಗೂ ಸಮನ್ವಯ ಸಾಧಿಸಿಲ್ಲವೆಂಬ ಸಬೂಬು ಕೇಳಿಬರುತ್ತಿದೆ. ಡಿಜಿಟಲ್ ವಾಹನ ಗ್ರಾಪಂಗಳಿಗೆ ತಲುಪಿದ ವೇಳೆ ಬ್ಯಾಂಕ್ ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದು, ರಾಜ್ಯ ಸರ್ಕಾರದ ಸ್ಪಂದನೆ ಕ್ಷೀಣವೆಂದು ದೂರಲಾಗುತ್ತಿದೆ. ಇಲಾಖೆ ಅಧಿಕಾರಿಗಳು, ಪಿಡಿಒಗಳಿಗೆ ಪಾಲ್ಗೊಳ್ಳದಂತೆ ಸಿಎಂ ಕಚೇರಿಯಿಂದ ಮೌಖಿಕ ಸೂಚನೆ ರವಾನೆಯಾಗಿದೆ ಎಂದು ಬಿಜೆಪಿ ಶಾಸಕರೊಬ್ಬರು ಆರೋಪಿಸಿದ್ದಾರೆೆ. ಅಧಿವೇಶನದಲ್ಲೂ ಈ ವಿಚಾರವಾಗಿ ಗದ್ದಲ ನಡೆದು, ಆಡಳಿತ- ಪ್ರತಿಪಕ್ಷ ಬಿಜೆಪಿ ಪರಸ್ಪರ ದೋಷಾರೋಪಣೆಗೆ ನಡೆಸಿದ್ದವು.

ಮೋದಿ ಕಾರ್ಯಕ್ರಮಗಳ ಮೇಲೆ ಬೆಳಕು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮ ಮಾತ್ರವಲ್ಲದೆ, ಮೋದಿ ಪರಿಕಲ್ಪನೆಯ ವಿಶೇಷ ಕಾರ್ಯಕ್ರಮಗಳ ಮೇಲೆ ಫೋಕಸ್ ಮಾಡಲಾಗಿದೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ‘ಬ್ರಾ್ಯಂಡ್ ಮೋದಿ’ಗೆ ಮತ್ತಷ್ಟು ಹೊಳಪು ತುಂಬುವ, ಪ್ರಮೋಟ್ ಪ್ರಯತ್ನಕ್ಕೆ ನಾವೇಕೆ ಕೈಜೋಡಿಸಬೇಕು ಎಂದು ಕೆಲ ಸಚಿವ, ಶಾಸಕರು ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಅನುಮಾನ: ರಾಜ್ಯ ಸರ್ಕಾರದ ನಾಡಿಮಿಡಿತ ಅರಿತಿರುವ ಬಿಜೆಪಿ ನಾಯಕರಿಗೆ ಯಾತ್ರೆ ಸಫಲಗೊಳಿಸುವ ಸವಾಲು ಎದುರಾಗಿದ್ದು, ಜನರಿಗೆ ತಲುಪಿಸುವುದಕ್ಕೆ ಶ್ರಮಿಸಲಾರಂಭಿಸಿದ್ದಾರೆ. ಯೋಜನೆಗಳ ಅರ್ಹ ವಂಚಿತರ ಪಟ್ಟಿಯೊಂದಿಗೆ ವರದಿ ಸಲ್ಲಿಸಲು ಗ್ರಾಮೀಣ ನಗರ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ರಾಜ್ಯ ಸರ್ಕಾರದ ಧೋರಣೆಯಿಂದ ಈ ವರದಿ ರವಾನೆ ಬಗ್ಗೆ ಬಿಜೆಪಿಗೆ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂವಾರು ಸಂಗ್ರಹ ಕಾರ್ಯದಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ-ಸಂಸದರಿಗೆ ಹೊಣೆ: ವಿಕಸಿತ ಭಾರತ ಯಾತ್ರೆಯ ಡಿಜಿಟಲ್ ವಾಹನವು ಗ್ರಾಪಂ, ನಗರ-ಪಟ್ಟಣಗಳ ವಾರ್ಡ್​ವಾರು ಸಂಚಾರ, ಇತಿಮಿತಿಯೊಳಗೆ ಫಲಾನುಭವಿಗಳನ್ನು ಸೇರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸಚಿವ ಸಂಪುಟವನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಸಚಿವರು, ಸಂಸದರಿಗೆ ಹೆಚ್ಚಿನ ಹೊಣೆ ನೀಡಿ, ಸಕ್ರಿಯ ಪಾಲ್ಗೊಳ್ಳಬೇಕೆಂಬ ಸೂಚನೆ ನೀಡಲಾಗಿದೆ. ಅಲ್ಲದೆ, 28 ಲೋಕಸಭೆ ಕ್ಷೇತ್ರಗಳ ತಲಾ ಒಂದು ಕಡೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಫಲಾನುಭವಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿ, ಪ್ರಚಾರ ಕಾರ್ಯಕ್ಕೆ ಹುರುಪು ತುಂಬಿದ್ದಾರೆ.

ಯಾವುದೆಲ್ಲ ಪ್ರಚಾರ?

ಗ್ರಾಮೀಣ ಪ್ರದೇಶ: ಪಿಎಂ ಆವಾಸ್, ಉಜ್ವಲ, ವಿಶ್ವಕರ್ಮ, ಕಿಸಾನ್ ಸಮ್ಮಾನ್ ನಿಧಿ, ಜೀವನ ಜ್ಯೋತಿ ಬಿಮಾ, ಕಿಸಾನ್ ಕ್ರೆಡಿಟ್ ಕಾರ್ಡ್, ಪೋಷಣ್ ಅಭಿಯಾನ, ಜಲ ಜೀವನ್ ಮಿಷನ್, ತಂತ್ರಜ್ಞಾನ ಬಳಸಿ ಹಳ್ಳಿಗಳ ಸಮೀಕ್ಷಾ ನಕ್ಷೆ ‘ಸ್ವಾಮಿತ್ವ’, ಅಟಲ್ ಪಿಂಚಣಿ, ಪಿಎಂ ಪ್ರಣಾಮ್ ನ್ಯಾನೋ ರಸಗೊಬ್ಬರ ಪ್ರೋತ್ಸಾಹ ಯೋಜನೆಗಳು.

ನಗರ-ಪಟ್ಟಣ: ಪಿಎಂ ಸ್ವನಿಧಿ, ಇ-ಬಸ್ ಸೇವೆ, ಅಮೃತ್, ಉಜ್ವಲ, ವಿಶ್ವಕರ್ಮ, ಜನೌಷಧ, ಡಿಜಿಟಲ್ ಪೇಮೆಂಟ್ ಮೂಲಸವಲತ್ತು, ರಾಷ್ಟ್ರೀಯ ಶಿಕ್ಷಣ ನೀತಿ, ಉದ್ಯೋಗ ಮೇಳ, ನವೋದ್ಯಮ, ಉಡಾನ್, ವಂದೇ ಭಾರತ್ ರೈಲು, ಅಮೃತ ಭಾರತ ರೈಲು ನಿಲ್ದಾಣ.

ಶೋಷಿತ ಸಮುದಾಯಗಳು: ಅನಿಮಿಯಾ ನಿವಾರಣೆ, ಏಕಲವ್ಯ ವಸತಿ ಶಾಲೆ, ಶಿಷ್ಯ ವೇತನ, ಅರಣ್ಯ ಹಕ್ಕುಪತ್ರ, ವನಧನ ವಿಕಾಸ ಕೇಂದ್ರ, ಇತ್ಯಾದಿ.

ಮುಖ್ಯ ಉದ್ದೇಶ

  • · ವಿವಿಧ ಯೋಜನೆಗಳಡಿ ಇದುವರೆಗೆ ವಂಚಿತ ಅರ್ಹರು, ಪ್ರಯೋಜನ ಪಡೆಯದ ದುರ್ಬಲರನ್ನು ತಲುಪುವುದು
  • · ವಿಡಿಯೋ, ಡಿಜಿಟಲ್ ಪ್ರಾತ್ಯಕ್ಷಿಕೆ ಮುಖೇನ ಮಾಹಿತಿ ಪ್ರಸಾರ, ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವುದು
  • · ಫಲಾನುಭವಿಗಳೊಂದಿಗೆ ಅವರ ವೈಯಕ್ತಿಕ ಕಥೆ/ ಅನುಭವ ಹಂಚಿಕೊಳ್ಳುವ ಮೂಲಕ ಆಪ್ತ ಸಂಪರ್ಕ- ಸಂವಹನ
  • · ಯಾತ್ರೆಯ ಸಂದರ್ಭದಲ್ಲಿ ಅಧಿಕೃತ ವಿವರಗಳ ದಾಖಲು ಮೂಲ ಸಂಭಾವ್ಯ ಫಲಾನುಭವಿಗಳ ಹೆಸರು ನೋಂದಣಿ