| ರಮೇಶ ಹಾರ್ಸಿಮನೆ ಸಿದ್ದಾಪುರ
ಎಲೆಚುಕ್ಕಿ ರೋಗಕ್ಕೆ ಅಡಕೆ ಬೆಳೆಗಾರರು ಬೆಚ್ಚಿಬಿದ್ದಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, ದ.ಕ. ಜಿಲ್ಲೆಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಲಕ್ಷಾಂತರ ಎಕರೆ ತೋಟದಲ್ಲಿನ ಅಡಕೆ ಮರಗಳಿಗೆ ಈಗ ಕುತ್ತು ಬಂದಿದೆ. ರೋಗ ನಿಯಂತ್ರಣಕ್ಕೆ ಸರಿಯಾದ ಮಾರ್ಗ ಕಾಣದೆ ಬೆಳೆಗಾರರು ಕಂಗಾಲಾಗಿದ್ದಾರೆ.
ಅಡಕೆ ಮರದ ಹಸಿರು ಸೋಗೆ (ಎಲೆ) ಮೇಲೆ ಚಿಕ್ಕದಾಗಿ ಕಾಣಿಸಿಕೊಳ್ಳುವ ಕಂದುಬಣ್ಣದ ಚುಕ್ಕಿ ಬಹಳ ಬೇಗ ವ್ಯಾಪಿಸಿ, ಇಡೀ ಸೋಗೆಯನ್ನು ಅಕಾಲಿಕವಾಗಿ ಒಣಗಿಸಿ, ಒಂದೆರಡು ವರ್ಷದಲ್ಲಿ ಮರವನ್ನೇ ಸಾಯಿಸುವ ಮೂಲಕ ರೈತನ ಹಲವು ವರ್ಷಗಳ ಶ್ರಮವನ್ನು ಮಣ್ಣು ಮಾಡುತ್ತದೆ.
ಶೀಘ್ರ ನಿಯಂತ್ರಣ ಸಾಧ್ಯವಾಗದೆ ಇದ್ದರೆ ಕೆಲವೇ ವರ್ಷಗಳಲ್ಲಿ ಅಡಕೆ ಬೆಳೆಯುವ ಪ್ರದೇಶದ ವಾರ್ಷಿಕ ಆದಾಯದಲ್ಲಿ ಸಾವಿರ ಕೋಟಿ ರೂ.ಗಿಂತ ಹೆಚ್ಚು ಖೋತಾ ಆಗುವ ಅಪಾಯವಿದೆ. ಎರಡು ವರ್ಷಕ್ಕಿಂತ ಹಿಂದೆಯೇ ಅಲ್ಲಲ್ಲಿ ರೋಗ ಕಾಣಿಸಿಕೊಂಡಿತ್ತು. ಈ ವರ್ಷದ ದುರ್ಬಲ ಮುಂಗಾರು, ಬಿಸಿಲು-ಮಳೆ ಆಟದಂಥ ವಾತಾವರಣದ ಪರಿಣಾಮವಾಗಿ ರೋಗ ಬಹುಬೇಗ ಹರಡುತ್ತಿದೆ ಎಂದು ರ್ತಸಲಾಗಿದೆ.
ಔಷಧವೂ ಇಲ್ಲ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 84 ಸಾವಿರ ಎಕರೆ ಅಡಕೆ ತೋಟವಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದ.ಕ. ಜಿಲ್ಲೆಗಳಲ್ಲಿಯೂ ವ್ಯಾಪಕವಾಗಿ ಅಡಕೆ ಬೆಳೆಯಲಾಗುತ್ತಿದೆ. ತೋಟದ ಕಾಲು ಭಾಗದಷ್ಟು ಪ್ರದೇಶದಲ್ಲಿ ಈಗ ರೋಗ ವ್ಯಾಪಿಸಿದೆ. ಇದರ ನಿವಾರಣೆಗೆ ತಜ್ಞರು, ವಿಜ್ಞಾನಿಗಳ ಬಳಿಯೂ ಸದ್ಯಕ್ಕೆ ಔಷಧ ಇಲ್ಲ. ತಜ್ಞರು ಹೇಳಿದಂತೆ ಶಿಲೀಂಧ್ರ ನಾಶಕ ಸಿಂಪಡಣೆಯಂಥ ಕ್ರಮ ಕೈಗೊಂಡರೂ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ರೈತರು ಹೇಳುತ್ತಾರೆ. ಇಂಥ ಸಂದರ್ಭದಲ್ಲಿ ರೈತರೇ ಮುಂದಾಗಿ ಅಲ್ಲಲ್ಲಿ ವಿಚಾರ ಸಂಕಿರಣ ಏರ್ಪಡಿಸುತ್ತಿದ್ದು, ಪರಿಹಾರ ಶೋಧಕ್ಕೆ ಪ್ರಯತ್ನ ಆರಂಭವಾಗಿದೆ.
ಇದೇ ವೇಳೆ, ಸರ್ಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಗಂಭೀರ ಆರೋಪವು ರೋಗಕ್ಕಿಂತ ಹೆಚ್ಚು ವ್ಯಾಪಕವಾಗಿ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ತುರ್ತಾಗಿ ಸರ್ಕಾರ ಕ್ರಮ ಕೈಗೊಂಡು ಅಡಕೆ ಬೆಳೆಗಾರರನ್ನು ಕಾಪಾಡಬೇಕಿದೆ.
ಪುತ್ತೂರು: ದಕ್ಷಿಣ ಕನ್ನಡದಲ್ಲಿ ಮೊದಲು ಸುಳ್ಯದಲ್ಲಿ ಕಾಣಿಸಿಕೊಂಡ ಎಲೆಚುಕ್ಕೆ ರೋಗ, ಕ್ರಮೇಣ ಇಡೀ ಜಿಲ್ಲೆಗೆ ವ್ಯಾಪಿಸುತ್ತಿದೆ. ಕಳೆದ ವರ್ಷ ಬೆಳ್ತಂಗಡಿ ಭಾಗದಲ್ಲಿ ತೀವ್ರವಾಗಿತ್ತು. ಈ ಸಲ ಮಳೆಗಾಲದಲ್ಲಿಯೂ ಬಿಸಿಲು ಬಿದ್ದಿರುವುದರಿಂದ ತುಸು ನಿಯಂತ್ರಣದಲ್ಲಿದೆಯಾದರೂ ಮಳೆ ಹೆಚ್ಚಿದರೆ ಅಥವಾ ಮಳೆ ಹಂಚಿಕೆಯಲ್ಲಿ ತೀವ್ರ ವ್ಯತ್ಯಯ ಉಂಟಾದರೆ ಬೇಗ ಹರಡುವ ಆತಂಕ ಇದ್ದೇ ಇದೆ. ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್ಐ) ರಾಜ್ಯದ ಎಲ್ಲ ಭಾಗದ ಡೇಟಾ ಸಂಗ್ರಹಕ್ಕೆ ಮುಂದಾಗಿದೆ. ಅಂಗಾಂಶ ಕೃಷಿ ಮೂಲಕ ಈ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಡೆದಿರುವ ಸಂಶೋಧನೆ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ವಿಜ್ಞಾನಿಗಳು ಶೀಘ್ರವಾಗಿ ಪರಿಣಾಮಕಾರಿ ಔಷಧ ಕಂಡುಹಿಡಿದರೆ ತೋಟಗಳು ನಾಶವಾಗುವುದನ್ನು ತಪ್ಪಿಸಬಹುದು ಎನ್ನುತ್ತಾರೆ ರೈತರು.
ಶಿವಮೊಗ್ಗ: ಕಳೆದ ವರ್ಷ ಜಿಲ್ಲೆಯಲ್ಲಿ ಎಲೆಚುಕ್ಕೆ ರೋಗದಿಂದ ಕಂಗಾಲಾಗಿದ್ದ ಅಡಕೆ ಬೆಳೆಗಾರರು ಈ ಬಾರಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. 2022ರಲ್ಲಿ ಜಿಲ್ಲೆಯಲ್ಲಿ ಸುಮಾರು ಆರು ಸಾವಿರ ಹೆಕ್ಟೇರ್ನಲ್ಲಿ ಕಾಣಿಸಿಕೊಂಡಿದ್ದ ರೋಗ ಈ ಬಾರಿ ಕಡಿಮೆ ಮಳೆ ಕಾರಣದಿಂದ ಹೆಚ್ಚು ಸಮಸ್ಯೆ ಉಂಟುಮಾಡಿಲ್ಲ. ತಡವಾಗಿ ಆರಂಭವಾದ ಮುಂಗಾರು, ಮಳೆಗಾಲದಲ್ಲೂ ಬಿಸಿಲು ಬಿದ್ದಿದ್ದು ಅಡಕೆ ಎಲೆಚುಕ್ಕೆ ರೋಗಕ್ಕೆ ಕಾರಣವಾಗುವ ಶಿಲೀಂಧ್ರಗಳ ಬೆಳವಣಿಗೆಗೆ ತಡೆಯೊಡ್ಡಿದೆ. ಹೀಗಾಗಿ ಈ ಭಾಗದ ಬೆಳೆಗಾರರು ಸ್ವಲ್ಪ ನಿರಾಳರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿಯ ಕೆಲ ಹೋಬಳಿಗಳಲ್ಲಿ ಎರಡು ವರ್ಷಗಳಿಂದ ಎಲೆಚುಕ್ಕೆ ರೋಗ ವ್ಯಾಪಕವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ತಾಲೂಕಿನಲ್ಲಿ ರೋಗದ ತೀವ್ರತೆ ಹೆಚ್ಚಿತ್ತು. ಈ ಬಾರಿ ಆತಂಕ ತುಸು ಕಡಿಮೆಯಾಗಿದೆ. ಮುಂದಿನ ವರ್ಷ ಇದೇ ಸ್ಥಿತಿ ಇರುತ್ತದೆ ಎಂದು ಹೇಳುವಂತಿಲ್ಲ.