ಬೆಂಗಳೂರು: ಹೊಸದಾಗಿ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಅವರು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ನಲ್ಲಿ ಮಾತನಾಡುತ್ತಿದ್ದು, ನೂತನ ಶಿಕ್ಷಣ ನೀತಿಯ ಪ್ರಮುಖ ಉದ್ದೇಶ ಇತ್ಯಾದಿಯನ್ನು ಸಮಗ್ರವಾಗಿ ವಿವರಿಸುತ್ತಿದ್ದಾರೆ.
ಈ ಹಿಂದೆ 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿದ್ದು, ಆ ಬಳಿಕ ಆ ನೀತಿಯ ಪರಿಷ್ಕರಣೆ ಆಗಿಲ್ಲ. ಹೀಗಾಗಿ 34 ವರ್ಷಗಳ ಬಳಿಕ ಹೊಸದೊಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದ್ದು, ಇದು ದೇಶದಲ್ಲೇ ಮೊದಲ ಸಲ ಕರ್ನಾಟಕದಲ್ಲಿ ಜಾರಿ ಆಗಲಿರುವುದು ಹೆಮ್ಮೆಯ ವಿಷಯ ಎಂಬುದಾಗಿ ಅವರು ಪ್ರದೀಪ್ ಹೇಳಿದ್ದಾರೆ.
ಈ ನೀತಿಯನ್ನು ರೂಪಿಸುವ ಸಮಿತಿಯಲ್ಲಿ ಡಾ.ಕಸ್ತೂರಿರಂಗನ್ ಸೇರಿ ಹಲವರು ಕಾರ್ಯನಿರ್ವಹಿಸಿದ್ದು, ಸುಮಾರು 5 ವರ್ಷಗಳ ವ್ಯಾಪಕ ಸಂವಾದ ನಡೆಸಿ ರೂಪಿಸಿದ ನೀತಿ. ಇದನ್ನು ಗ್ರಾಮದಿಂದ ರಾಷ್ಟ್ರಮಟ್ಟದ ವರೆಗೆ ಚರ್ಚೆ ನಡೆಸಿ ರೂಪಿಸಲಾಗಿದೆ. ಈ ಕುರಿತ ಡ್ರಾಫ್ಟ್ 2019ರಲ್ಲಿ 22 ಭಾಷೆಯಲ್ಲಿ ಪಬ್ಲಿಷ್ ಆಗಿತ್ತು ಎಂದು ವಿವರಿಸಿದ್ದಾರೆ.
ಭಾರತವನ್ನು ಗ್ಲೋಬಲ್ ನಾಲೆಜ್ ಸೂಪರ್ ಪವರ್ ಆಗಿಸುವುದು, ಅದರ ಜೊತೆಜೊತೆಗೆ ಭಾರತೀಯತೆಯನ್ನು ಕಾಪಾಡಿಕೊಳ್ಳುವುದು ಈ ನೂತನ ನೀತಿಯ ಪ್ರಮುಖ ಉದ್ದೇಶ. ಅಲ್ಲದೆ ಪ್ರತಿ ವಿದ್ಯಾರ್ಥಿಯನ್ನು ನಿಜವಾಗಿಯೂ ಜಾಗತಿಕ ನಾಗರಿಕ ಆಗಿಸುವುದು. ಅಂದರೆ ಕುವೆಂಪು ಅವರು ಹೇಳಿದಂತೆ ವಿಶ್ವಮಾನವರನ್ನಾಗಿಸುವುದು ಈ ನೀತಿಯ ಗುರಿ. ಅದರಲ್ಲೂ ತಮ್ಮತನವನ್ನು ಕಳೆದುಕೊಳ್ಳದೆ ವಿಶ್ವಮಾನವರನ್ನು ಆಗಿಸುವುದು ಈ ನೀತಿಯ ಪ್ರಮುಖ ಉದ್ದೇಶ ಎಂದು ಹಲವಾರು ವಿಚಾರಗಳನ್ನು ಪ್ರದೀಪ್ ಅವರು ಹಂಚಿಕೊಳ್ಳುತ್ತಿದ್ದಾರೆ.