ನ್ಯೂಸ್

ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಹಿಳಾ SI ನಿಗೂಢ ಕಣ್ಮರೆ! 2 ದಿನದ ಬಳಿಕ ಕಾದಿತ್ತು ಅಚ್ಚರಿ

ಭುವನೇಶ್ವರ್​: ಒಡಿಶಾದ ಬೊಲಂಗೀರ್​ನಲ್ಲಿರುವ ಭೀಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಬಿಬಿಎಂಸಿಎಚ್‌)ಯಿಂದ ಇದಕ್ಕಿದ್ದಂತೆ ನಾಪತ್ತೆಯಾಗಿ ಭಾರೀ ನಿಗೂಢಕ್ಕೆ ಕಾರಣವಾಗಿದ್ದ ಮಹಿಳಾ ಸಬ್​ ಇನ್ಸ್​ಪೆಕ್ಟರ್ ಕಾಜಲ್ ಬ್ಯಾಗ್ ಶನಿವಾರ ಪತ್ತೆಯಾಗಿದ್ದಾರೆ. ಮನೆಯಲ್ಲಿಯೇ ಇದ್ದರು ಎಂದು ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಆಗಸ್ಟ್ 23 ರಂದು ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ನಂತರ ಎಸ್​ಐ ಕಾಜಲ್​ ಬ್ಯಾಗ್ ಬಿಬಿಎಂಸಿಎಚ್‌ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ಎಸ್‌ಐ ನಿಗೂಢವಾಗಿ ಕಣ್ಮರೆಯಾಗಿದ್ದರು. ಎರಡ್ಮೂರು ದಿನ ಹುಡುಕಾಡಿದರೂ ಕೂಡ ಎಸ್​ಐ ಸುಳಿವು ಮಾತ್ರ ಸಿಗಲೇ ಇಲ್ಲ. ಆಕೆ ಮೃತಪಟ್ಟಿರಬಹುದು ಎಂದೇ ಭಾವಿಸಿದ್ದರು. ಅಲ್ಲದೆ, ಈ ಪ್ರಕರಣ ಪೊಲೀಸರಿಗೆ ಭಾರೀ ತಲೆನೋವಾಗಿತ್ತು. ಈ ಬಗ್ಗೆ ಮಾತನಾಡದೇ ಪೊಲೀಸರು ಕೂಡ ಮೌನ ವಹಿಸಿದ್ದರು.

ಆದರೆ ಶನಿವಾರ ಆಕೆಯ ತಂದೆ ಮನಗೋವಿಂದ ಬ್ಯಾಗ್ ಅವರು ಮಾಧ್ಯಮಗಳ ಮುಂದೆ ಬಂದು ಪ್ರಸ್ತುತ ಕುಟುಂಬ ಸದಸ್ಯರೊಂದಿಗೆ ಎಸ್​ಐ ಕಾಜಲ್​ ಬ್ಯಾಗ್​ ಇದ್ದಾರೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ಸ್ಥಳೀಯ ಪೊಲೀಸರು ಕೂಡ ಅಚ್ಚರಿಗೆ ಒಳಗಾಗಿದ್ದಾರೆ.

ಕಾಜಲ್​ ಬ್ಯಾಗ್​ ಫೀಟ್​ ಆ್ಯಂಡ್​ ಫೈನ್​ ಆಗಿದ್ದಾಳೆ. ಮನೆಯಲ್ಲಿ ನಮ್ಮೊಂದಿಗೆ ಇದ್ದಾಳೆ. ಕೌಟುಂಬಿಕ ಕಲಹಗಳಿಂದ ತುಂಬಾ ವಿಚಲಿತಗೊಂಡಿದ್ದಳು. ಇದೀಗ ಎಲ್ಲವೂ ಸರಿಯಾಗಿದೆ ಎಂದು ಮನಗೋವಿಂದ ಬ್ಯಾಗ್ ಫೋನ್​ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಇದೀಗ ಉದ್ಭವವಾಗಿರುವ ಪ್ರಶ್ನೆ ಏನೆಂದರೆ, ಕೌಟುಂಬಿಕ ಸಮಸ್ಯೆಯಿಂದ ಎಸ್​ಐ ಆತ್ಮಹತ್ಯೆಗೆ ಯತ್ನಿಸಿದ್ದರೆ ಆ ದಿನವೇ ಆಕೆಯ ತಂದೆ ಮಾಧ್ಯಮದ ಮುಂದೆ ಏಕೆ ಹೇಳಲಿಲ್ಲ ಮತ್ತು ಈಗ ಏಕಾಏಕಿ ಕಾಣಿಸಿಕೊಂಡಿದ್ದೇಕೆ ಎಂದು ಪ್ರಶ್ನಿಸಲಾಗುತ್ತಿದೆ.

ಅಂದಹಾಗೆ ಕಾಜಲ್​ ಬ್ಯಾಗ್​ ಅವರು ಬೋಲಂಗೀರ್ ಜಿಲ್ಲೆಯ ಸೈಂತಲಾ ಬ್ಲಾಕ್‌ನ ಗೋಪಬಂಧು ನಗರದಲ್ಲಿ ಬಾಡಿಗೆ ವಸತಿಗೃಹದಲ್ಲಿ ತಂಗಿದ್ದರು. ಬುಧವಾರ ರಾತ್ರಿ ಆಕೆ ಬೇರೊಬ್ಬರ ಜತೆ ಫೋನ್‌ನಲ್ಲಿ ಏರು ಧ್ವನಿಯಲ್ಲಿ ಮಾತನಾಡುತ್ತಿರುವುದು ನೆರೆಹೊರೆಯವರಿಗೆ ಕೇಳಿಸಿತು. ಇದಾದ ಕೆಲವೇ ಗಂಟೆಗಳಲ್ಲಿ ಆಕೆ ಸೊಳ್ಳೆ ವಿರೋಧಿ ದ್ರವವನ್ನು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

ಕಾಜಲ್​ ಬ್ಯಾಗ್​ ಆತ್ಮಹತ್ಯೆ ಯತ್ನಸಿರುವ ಸುದ್ದಿಯನ್ನು ಯುವಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಘಟನಾ ಸ್ಥಳಕ್ಕೆ ಸೈಂತಾಲಾ ಠಾಣೆಯ ಪೊಲೀಸರು ಆಗಮಿಸಿ, ಆಕೆಯನ್ನು ರಕ್ಷಿಸಿ, ತಕ್ಷಣವೇ ಆಕೆಯನ್ನು ಸೈಂತಾಲ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ನಂತರ ಭೀಮಾ ಭೋಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಿತು. ಕೆಲ ಮೂಲಗಳ ಪ್ರಕಾರ ಪ್ರೇಮ ಪ್ರಕರಣಕ್ಕೆ ಮನನೊಂದು ಕಾಜಲ್​ ಬ್ಯಾಗ್​ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)