ನ್ಯೂಸ್

ತಮ್ಮ ಸಿನಿಮಾ ಬೆಂಬಲಿಸಿ; ಸ್ಟಾರ್​ ನಟರಿಗೆ ಮನವಿ ಮಾಡಿದ ನಿರ್ದೇಶಕಿ!

ಆಂಧ್ರಪ್ರದೇಶ: ಇತ್ತೀಚೆಗಷ್ಟೇ ತೆಲುಗು ಭಾಷೆಯಲ್ಲಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ 'ಮಾರ್ಟಿನ್ ಲೂಥರ್ ಕಿಂಗ್' ಸಿನಿಮಾಗೆ ಚಿತ್ರತಂಡ ನಿರೀಕ್ಷಿಸಿದಂತೆ ಪ್ರತಿಕ್ರಿಯೆಗಳು ಲಭಿಸಿದೆ. ಆದ್ರೆ ತಮ್ಮ ಚಿತ್ರದ ಬಗ್ಗೆ ಸ್ಟಾರ್​ ನಟರು ಮತ್ತು ರಾಜಕಾರಣಿಗಳು ನೋಡಿ, ಪ್ರೋತ್ಸಾಹಿಸುವಂತೆ ಸಿನಿಮಾದ ನಿರ್ದೇಶಕರಾದ ಪೂಜಾ ಅಪರ್ಣಾ ಕೊಲ್ಲೂರು ಮನವಿ ಮಾಡಿದ್ದಾರೆ.

ಸಂಪೂರ್ಣೇಶ್ ಅವರ 'ಮಾರ್ಟಿನ್ ಲೂಥರ್ ಕಿಂಗ್' ಇತ್ತೀಚೆಗೆ ಬಿಡುಗಡೆಯಾದ ಗ್ರಾಮೀಣ ರಾಜಕೀಯ ನಾಟಕವಾಗಿದೆ. ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ. ಈ ಮಧ್ಯೆ ಪ್ರೇಕ್ಷಕರ ಗಮನವನ್ನು ಮತ್ತಷ್ಟು ತಮ್ಮ ಚಿತ್ರದತ್ತ ಸೆಳೆಯಲು ಮುಂದಾಗಿರುವ ನಿರ್ದೇಶಕಿ, ಟಾಲಿವುಡ್​ನ ಸ್ಟಾರ್​ ನಟರು ಮತ್ತು ರಾಜಕಾರಣಿಗಳನ್ನು ಟ್ಯಾಗ್​ ಮಾಡುವ ಮುಖೇನ ಚಿತ್ರಕ್ಕೆ ಬೆಂಬಲಿಸುವಂತೆ ಕೋರಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ 'ಮಾರ್ಟಿನ್ ಲೂಥರ್ ಕಿಂಗ್' ಸಿನಿಮಾಗೆ ಹೆಚ್ಚಿನ ಬೆಂಬಲ ಕೋರಿರುವ ನಿರ್ದೇಶಕಿ ಪೂಜಾ ಅಪರ್ಣಾ ಕೊಲ್ಲೂರು, ತಮ್ಮ ಚಿತ್ರದ ವಿಶೇಷ ಪ್ರದರ್ಶನಕ್ಕೆ ಹಾಜರಾಗಲು ಖ್ಯಾತ ಸೆಲೆಬ್ರಿಟಿಗಳನ್ನು ಕೇಳಿದ್ದಾರೆ.

ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ, ನಟ ಚಿರಂಜೀವಿ, ನಾಗಾರ್ಜುನ, ವೆಂಕಟೇಶ್​, ಬಾಲಕೃಷ್ಣ, ಮಹೇಶ್​ ಬಾಬು, ರಾಮ್​ಚರಣ್​, ಅಲ್ಲು ಅರ್ಜುನ್​, ಪ್ರಭಾಸ್​ ಮತ್ತು ರಾಣಾ ದಗ್ಗುಬಾಟಿ ಸೇರಿದಂತೆ ಹಲವರನ್ನು ಟ್ಯಾಗ್​ ಮಾಡಿ, ನಿಮ್ಮ ಬ್ಯುಸಿ ಶೆಡ್ಯೂಲ್​ ಮಧ್ಯೆ ಬಿಡುವು ಮಾಡಿಕೊಂಡು ನಮ್ಮ ಸಿನಿಮಾ ವೀಕ್ಷಿಸಿ, ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದ್ದಾರೆ,(ಏಜೆನ್ಸೀಸ್).