Dipika Kakar: ಹಿಂದಿ ಟಿವಿ ಧಾರವಾಹಿಗಳಿಂದ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಕಿರುತೆರೆ ನಟಿ ದೀಪಿಕಾ ಕಾಕರ್, ಇದೀಗ ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪತ್ನಿಯ ಗಂಭೀರ ಸಮಸ್ಯೆ ಕುರಿತು ಮನಬಿಚ್ಚಿ ಮಾತನಾಡಿರುವ ದೀಪಿಕಾ ಪತಿ ಶೋಯೆಬ್ ಇಬ್ರಾಹಿಂ, ನಿಮ್ಮೆಲ್ಲರ ಪ್ರಾರ್ಥನೆ ಅವಳಿಗೆ ಅಗತ್ಯವಿದೆ ಎಂದು ವಿಡಿಯೋ ಮೂಲಕ ಕೋರಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೊಸ ವಿಡಿಯೋದಲ್ಲಿ ಮಾಹಿತಿ ಹಂಚಿಕೊಂಡಿರುವ ಶೋಯೆಬ್, "ಪತ್ನಿ ದೀಪಿಕಾ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ. ಅವರ ಆರೋಗ್ಯ ಸರಿಯಿಲ್ಲ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ದೀಪಿಕಾ ಲಿವರ್ನಲ್ಲಿ ಟೆನ್ನಿಸ್ ಬಾಲ್ ಗಾತ್ರದ ಗೆಡ್ಡೆ ಇರುವುದು ಪತ್ತೆಯಾಗಿದೆ" ಎಂದರು.
"ಕೆಲವು ದಿನಗಳ ಹಿಂದೆ ಆಕೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ಮೊದಲಿಗೆ ನಾವು ಅಸಿಡಿಟಿ ಎಂದು ಭಾವಿಸಿ ಸುಮ್ಮನಾದೆವು. ಆದರೆ, ನಂತರದಲ್ಲಿ ಇದರ ನೋವು ಮತ್ತಷ್ಟು ಉಲ್ಬಣಿಸಿತು. ವೈದ್ಯರ ಸಲಹೆ ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಗೊತ್ತಾಯಿತು, ಆಕೆಗೆ ಲಿವರ್ನ ಎಡಭಾಗದಲ್ಲಿ ಗೆಡ್ಡೆ ಇದೆ ಎಂಬ ಶಾಕಿಂಗ್ ಸಂಗತಿ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಬ್ರಹ್ಮೋಸ್, ಪಾಕಿಸ್ತಾನವನ್ನು ಯಾವುದೇ ಸಮಯದಲ್ಲಾದರೂ ಹೊಡೆದುರುಳಿಸುತ್ತದೆ; ಅಮೆರಿಕ ಯುದ್ಧ ತಜ್ಞ| Brahmos missile
"ಅದು ಕ್ಯಾನ್ಸರ್ ಅಥವಾ ಟ್ಯೂಮರ್ಗೆ ತಿರುಗಿದೆಯಾ ಎಂಬ ನನ್ನ ಪ್ರಶ್ನೆಗೆ, ಸಿಟಿ ಸ್ಕ್ಯಾನ್ ಕ್ಯಾನ್ಸರ್ ತೋರಿಸುತ್ತಿಲ್ಲ. ಆದರೆ, ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸುಸಜ್ಜಿತ ಹೈಟೆಕ್ ಆಸ್ಪತ್ರೆಯಲ್ಲಿ ಪತ್ನಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಟಿ ಸ್ಕ್ಯಾನ್, ಸೋನೋಗ್ರಫಿ ಮತ್ತು ರಕ್ತ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿಸಲಾಗಿದೆ. ಇದ್ಯಾವುದರಲ್ಲಿಯೂ ಆಕೆಗೆ ಕ್ಯಾನ್ಸರ್ ಇರುವುದು ಅಥವಾ ಸೂಚನೆಗಳು ಲಭಿಸಿಲ್ಲ. ಇದು ಖುಷಿಯ ಸಂಗತಿ. ಆದರೂ ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಉಳಿದಿವೆ. ಈ ಕಠಿಣ ಸಮಯದಲ್ಲಿ ನಿಮ್ಮೆಲ್ಲರ ಪ್ರಾರ್ಥನೆ ಜೊತೆಗಿರಲಿ" ಎಂದು ನೋಡುಗರ ಬಳಿ ಕೇಳಿಕೊಂಡಿದ್ದಾರೆ,(ಏಜೆನ್ಸೀಸ್).