ನ್ಯೂಸ್

ವಿಪಕ್ಷ ನಾಯಕ ಆಯ್ಕೆಯಾಗದ ಹಿನ್ನೆಲೆ: ಬಿಜೆಪಿಯ ಕಾಲೆಳೆದ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಅಧಿಕೃತ ವಿರೋಧ ಪಕ್ಷವಾದ BJP ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಒಂದು ಸೋಲು ವಿಪಕ್ಷ ನಾಯಕನನ್ನೂ ಆಯ್ಕೆ ಮಾಡದಷ್ಟು ಬಿಜೆಪಿ ನಾಯಕರಿಗೆ ಜಿಗುಪ್ಸೆ ಹುಟ್ಟಿಸಿದೆಯೇ ಎಂದು ಸಚಿವ ದಿನೇಶ್​​ ಗುಂಡುರಾವ್​​ ವಾಗ್ದಾಳಿ ನಡೆಸಿದ್ಧಾರೆ.

ಕಾಂಗ್ರೇಸ್​ ಸರ್ಕಾರದ ಪ್ರಥಮ ಬಜೆಟ್ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ. ಅಧಿವೇಶನ ಶುರುವಾಗುತ್ತಿದ್ದರೂ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿಯು ವಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಒಂದು ಸೋಲು ಬಿಜೆಪಿ ನಾಯಕರಿಗೆ ಜಿಗುಪ್ಸೆ ಹುಟ್ಟಿಸಿದೆಯೇ, ವಿಪಕ್ಷ ನಾಯಕನಿಲ್ಲದೆ ಅಧಿವೇಶನ ‌ನಡೆಸಬೇಕೇ ಎಂದು ಸಚಿವರು ಬಿಜೆಪಿಗರ ಕಾಲೆಳೆದಿದ್ದಾರೆ.

ಇದನ್ನೂ ಓದಿ: ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ ಶೀರ್ಷಿಕೆಯಡಿ ಹೋರಾಟ ಮಾಡುತ್ತೇವೆ: ಡಾ.ಸಿ.ಎನ್.ಅಶ್ವತ್ಥ ನಾರಾಯಣ

ಮುಖ್ಯಮಂತ್ರಿಯಂತೆ ವಿರೋಧ ಪಕ್ಷ ನಾಯಕನ ಹುದ್ದೆಯೂ ಸಾಂವಿಧಾನಿಕ ಹುದ್ದೆಯಾಗಿದೆ. ಚುನಾವಣೆಯ ನಂತರ ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿಯವರು, ರಾಜ್ಯದ ಸಿಎಂ ಯಾರು ಎಂದು ಪದೇ ಪದೇ ಕೇಳುತ್ತಿದ್ದರು. ನಮ್ಮಲ್ಲಿ ಸಿಎಂ, ಡಿಸಿಎಂ ಜತೆಗೆ ಪೂರ್ಣಪ್ರಮಾಣದ ಸಂಪುಟವೂ ರಚನೆಯಾಗಿದೆ. ರಾಜ್ಯದ ವಿಪಕ್ಷ ನಾಯಕ ಯಾರು? ಎಂದು ಗುಂಡುರಾವ್​​ ಬಿಜೆಪಿಗರಿಗೆ ಸವಾಲ್​ ಎಸೆದಿದ್ದಾರೆ.

ವಿಪಕ್ಷ ನಾಯಕ ಯಾರಾಗಬೇಕೆಂಬುದು ಬಿಜೆಪಿಯ ಆಂತರಿಕ ವಿಚಾರ ಇರಬಹುದು. ಆದರೆ ಸಂವಿಧಾನದಲ್ಲಿ ವಿಪಕ್ಷ ನಾಯಕನ ಹುದ್ದೆಗೆ ಮಹತ್ವದ ಸ್ಥಾನವಿದೆ. ಸರ್ಕಾರದ ತಪ್ಪು ಒಪ್ಪುಗಳನ್ನು ತಿದ್ದಿ ತೀಡುವುದು ವಿಪಕ್ಷ ನಾಯಕನ ಕೆಲಸವಾಗಿದ್ದು, ಇದೇ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯವಾಗಿದೆ. ಬಿಜೆಪಿಯವರ ಆಂತರಿಕ ಜಗಳ ಏನೇ ಇರಲಿ, ಮೊದಲು ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ ಎಂದು ಸಚಿವರು ಟ್ವೀಟ್​​ ಮಾಡಿದ್ದಾರೆ.(ಏಜೆನ್ಸೀಸ್​)