ನ್ಯೂಸ್

ಸಕಲ ಸರ್ಕಾರಿ ಗೌರವಗಳೊಂದಿಗೆ ಅಂಗಾಂಗ ದಾನಿಗಳ ಅಂತ್ಯಕ್ರಿಯೆ; ಶೀಘ್ರದಲ್ಲೇ ಹೊಸ ನೀತಿ: ದಿನೇಶ್​ ಗುಂಡೂರಾವ್

ಬೆಂಗಳೂರು: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿಗಳನ್ನು ಮತ್ತು ಕುಟುಂಬದವರನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ಅಂಗಾಂಗ ದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿಗಳನ್ನು ಮತ್ತು ಕುಟುಂಬದವರನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ. ಅಂಗಾಂಗ ದಾನ ಮಾಡುವ ವ್ಯಕ್ತಿ ಅಥವಾ ಕುಟುಂಬಗಳಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸುವ ಹಾಗು ತಮಿಳುನಾಡು ಮಾದರಿಯಲ್ಲಿ ಅಂಗಾಂಗ ದಾನಿಗಳ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ.

ಈ ಮೂಲಕ ಅಂಗಾಂಗ ದಾನದ ಮಹತ್ವವನ್ನು ಸಾರಲು ಮತ್ತು ಮತ್ತಷ್ಟು ಜನರಿಗೆ ಅಂಗಾಂಗ ದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಸರ್ಕಾರವು ಶೀಘ್ರದಲ್ಲೇ ನೀತಿಯೊಂದನ್ನು ರೂಪಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಸಾಮಾಜಿಕ ಜಾಲತಾಣ ಎಕ್ಸ್​ ಮೂಲಕ ತಿಳಿಸಿದ್ದಾರೆ.